ನವದೆಹಲಿ: ರಾಜ್ಯದ 20,668 ಚದರ ಕಿ.ಮೀ. ಸೇರಿದಂತೆ ಪಶ್ಚಿಮ ಘಟ್ಟಗಳ 56,000 ಚದರ ಕಿ.ಮೀ.ಗೂ ಅಧಿಕ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಅಂತಿಮಗೊಳಿಸಲು ಕೇಂದ್ರ ಪರಿಸರ ಸಚಿವಾಲಯ 7ನೇ ಕರಡು ಅಧಿಸೂಚನೆ ಬಿಡುಗಡೆ ಮಾಡಿದೆ.
2024ರ ಜುಲೈ 31 ರಂದು ಹೊರಡಿಸಲಾಗಿದ್ದ ಹಿಂದಿನ ಕರಡು ಅಧಿ ಸೂಚನೆಯ 725 ದಿನಗಳ ಕಾಲಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಹೊಸದಾಗಿ ಅರ್ಜಿ ಸೂಚನೆ ಹೊರಡಿಸಲಾಗಿದೆ. ಸೋಮವಾರ ಹೊರಡಿಸಿರುವ ಏಳನೇ ಕರಡು ಅಧಿಸೂಚನೆಯಲ್ಲಿ ಒಟ್ಟು 56,825.7 ಚದರ ಕಿ.ಮೀ. ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗಿದೆ.
ಪಶ್ಚಿಮ ಘಟ್ಟಗಳು ಹಾದುಹೋಗುವ ಕರ್ನಾಟಕದ 20,668 ಚಕಿಮೀ, ಮಹಾರಾಷ್ಟ್ರದ 17,340 ಚಕಿಮೀ, ಕೇರಳದ 9993.7 ಚಕಿಮೀ, ತಮಿಳುನಾಡಿನ 6914 ಚಕಿಮೀ, ಗೋವಾದ 1461 ಚಕಿಮೀ, ಗುಜರಾತ್ ನ 449 ಚಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗಿದೆ.
ವಿಶಿಷ್ಟ ಜೀವ ವೈವಿಧ್ಯ ಸಂಪನ್ಮೂಲಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಗಣಿಗಾರಿಕೆ, ಕಟ್ಟಡ ನಿರ್ಮಾಣ, ಶಾಖೋತ್ಪನ್ನ ವಿದ್ಯುತ್ ಘಟಕಗಳ ಚಟುವಟಿಕೆ ನಿರ್ಬಂಧಿಸಲಾಗಿದೆ.
ಕೇಂದ್ರ ಪರಿಸರ ಸಚಿವಾಲಯವು ಪಶ್ಚಿಮ ಘಟ್ಟಗಳ 56,825 ಚಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿದೆ. ವಿಶಿಷ್ಟ ಜೀವವೈವಿಧ್ಯವನ್ನು ಹೊಂದಿರುವ ಈ ಪ್ರದೇಶ ಸಂರಕ್ಷಣೆಗೆ ವಿಶೇಷ ಗಮನ ನೀಡಬೇಕಾದ ಪ್ರದೇಶವೆಂದು ಪರಿಸರ ಸಚಿವಾಲಯ ಗುರುತಿಸಿದೆ. ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಿಸುವ ಪ್ರಸ್ತಾಪವನ್ನು ಮೊದಲ ಬಾರಿಗೆ 2018ರಲ್ಲಿ ಮಾಧವ ಗಾಡ್ಗೀಳ್ ಸಮಿತಿ ಶಿಫಾರಸು ಮಾಡಿತ್ತು. 2018ರಲ್ಲಿ ಕೆ. ಕಸ್ತೂರಿರಂಗನ್ ಸಮಿತಿಯು ಇದನ್ನು ಪರಿಶೀಲಿಸಿ ವರದಿ ನೀಡಿದ್ದು, 2014ರ ಮಾರ್ಚ್ ನಲ್ಲಿ ಮೊದಲ ಕರಡು ಜಾರಿಯಾದ ನಂತರ ಇದುವರೆಗೆ ಒಟ್ಟು 7 ಬಾರಿ ಕರಡು ಅಧಿಸೂಚನೆ ಹೊರಡಿಸಲಾಗಿದೆ.

