ಬೆಂಗಳೂರು: ಮಂಗಳೂರಿನ ಕೆರಾಡಿ ಎಂಬ ಸಣ್ಣ ಹಳ್ಳಿಯಿಂದ ಬಂದು ಕಾಂತಾರ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಇದೀಗ ಹಾಲಿವುಡ್ನ ಅತ್ಯಂತ ಜನಪ್ರಿಯ ಸೂಪರ್ ಹೀರೋ ಫ್ರಾಂಚೈಸಿ ಸ್ಪೈಡರ್ ಮ್ಯಾನ್ ಪ್ರಪಂಚಕ್ಕೆ ಕಾಲಿಡುವ ಮೂಲಕ ಕನ್ನಡ ಹಾಗೂ ಭಾರತೀಯ ಚಿತ್ರರಂಗವೇ ಹೆಮ್ಮೆಪಡುವಂತೆ ಮಾಡಿದ್ದಾರೆ.
ಹಾಲಿವುಡ್ನ ಪ್ರಸಿದ್ಧ ನಿರ್ಮಾಣ ಸಂಸ್ಥೆ ಸೋನಿ ಪಿಕ್ಚರ್ಸ್, ತನ್ನ ಮುಂಬರುವ ಬೃಹತ್ ಸಿನಿಮಾ ಸ್ಪೈಡರ್ ಮ್ಯಾನ್ ಬ್ರ್ಯಾಂಡ್ ನ್ಯೂ ಡೇ’ ಪ್ರಚಾರಕ್ಕಾಗಿ ರಿಷಬ್ ಶೆಟ್ಟಿ ಅವರೊಂದಿಗೆ ಕೈಜೋಡಿಸಿದೆ. ಈ ಮೂಲಕ ಜಾಗತಿಕ ಮಟ್ಟದ ಬಿಗ್ ಬಜೆಟ್ ಸಿನಿಮಾವೊಂದರ ಪ್ರಚಾರದಲ್ಲಿ ಭಾಗಿಯಾದ ಭಾರತದ ಮೊದಲ ನಟ ಎಂಬ ಐತಿಹಾಸಿಕ ದಾಖಲೆಯನ್ನು ರಿಷಬ್ ಶೆಟ್ಟಿ ತಮ್ಮದಾಗಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಶೇಷ ಪ್ರೋಮೋ
ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ರಿಷಬ್ ಶೆಟ್ಟಿ ಅಭಿನಯದ ವಿಶೇಷ ಪ್ರಚಾರದ ಪ್ರೋಮೋ ಒಂದನ್ನು ಹಂಚಿಕೊಂಡಿದೆ. “ರಿಷಬ್ ಶೆಟ್ಟಿ ಪೀಟರ್ ಪಾರ್ಕರ್ ಪ್ರಪಂಚಕ್ಕೆ ಪ್ರವೇಶಿಸುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ…” ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿರುವ ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಪ್ರೋಮೋದಲ್ಲೇನಿದೆ?
ವಿಡಿಯೋದಲ್ಲಿ ರಿಷಬ್ ಶೆಟ್ಟಿ ಅವರನ್ನು ಅವರ ತಂಡದವರೇ ಮರೆತು ಹೋಗಿರುತ್ತಾರೆ. ರಿಷಬ್ ಶೆಟ್ಟಿ ಯಾರೆಂಬುದು ಅವರ ಗೆಳೆಯರು ಮತ್ತು ಸಹೋದ್ಯೋಗಿಗಳಿಗೆ ನೆನಪಿರುವುದಿಲ್ಲ. ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಸಿನಿಮಾದ ಅಂತ್ಯದಲ್ಲೂ ಪೀಟರ್ ಪಾರ್ಕರ್ ಪರಿಸ್ಥಿತಿ ಇದೇ ಆಗಿತ್ತುಆತನ ಆಪ್ತ ಸ್ನೇಹಿತ ನೆಡ್ (ಜೇಕಬ್ ಬಾಟಲಾನ್) ಹಾಗೂ ಪ್ರಿಯತಮೆ ಎಂಜೆ (ಜೆಂಡಾಯಾ) ಸೇರಿದಂತೆ ಇಡೀ ಜಗತ್ತೇ ಆತನ ಗುರುತನ್ನು ಮರೆತಿರುತ್ತದೆ.
ತನ್ನವರೇ ತನ್ನನ್ನು ಮರೆತಿರುವ ಬಗ್ಗೆ ರಿಷಬ್ ಶೆಟ್ಟಿ ಆಶ್ಚರ್ಯ ಪಡುತ್ತಿರುವಾಗ ಅವರ ಎದುರು ಸ್ಪೈಡರ್ ಮ್ಯಾನ್ ಕಾಣಿಸಿಕೊಳ್ಳುತ್ತಾನೆ. “ನೀನು ಹೇಗೆ ಇದನ್ನೆಲ್ಲ ನಿಭಾಯಿಸುತ್ತೀಯ?” ಎಂದು ರಿಷಬ್ ಶೆಟ್ಟಿ ಸ್ಪೈಡರ್ ಮ್ಯಾನ್ ಬಳಿ ಕೇಳಿದಾಗ ಬ್ರ್ಯಾಂಡ್ ನ್ಯೂ ಡೇ ಸಿನಿಮಾದ ಝಲಕ್ ಪ್ರದರ್ಶನಗೊಳ್ಳುತ್ತದೆ.
“ಯಾರು ಎಲ್ಲವನ್ನೂ ಕಳೆದುಕೊಂಡರೂ ಮತ್ತೆ ಮೊದಲಿನಿಂದ ಶುರು ಮಾಡುತ್ತಾನೋ ಅವನೇ ನಿಜವಾದ ಹೀರೋ”
ರಿಷಬ್ ಶೆಟ್ಟಿ
ಏನಿದು ಬ್ರ್ಯಾಂಡ್ ನ್ಯೂ ಡೇ ಕಥಾಹಂದರ?
ಈ ಹೊಸ ಚಿತ್ರವು ಸ್ಪೈಡರ್ ಮ್ಯಾನ್: ನೋ ವೇ ಹೋಮ್ ಕಥೆಯ ಮುಂದುವರಿದ ಭಾಗವಾಗಿದೆ. ನ್ಯೂಯಾರ್ಕ್ ನಗರದಲ್ಲಿ ಸಂಪೂರ್ಣ ಒಂಟಿಯಾಗಿ, ತನ್ನ ನಿಜವಾದ ಗುರುತನ್ನು ಮುಚ್ಚಿಟ್ಟು, ಪೂರ್ಣಾವಧಿ ಸ್ಪೈಡರ್ ಮ್ಯಾನ್ ಆಗಿ ಅಪರಾಧಗಳ ವಿರುದ್ಧ ಹೋರಾಡುವ ರೋಮಾಂಚನಕಾರಿ ಪಯಣ ಇಲ್ಲಿದೆ. ಈ ಹೊಸ ಭಾಗದಲ್ಲಿ ಸ್ಪೈಡರ್ ಮ್ಯಾನ್ ಹಲ್ಕ್ ಸೇರಿದಂತೆ ಹಲವು ಶಕ್ತಿಶಾಲಿ ಎದುರಾಳಿಗಳ ವಿರುದ್ಧ ಹೋರಾಡಲಿದ್ದಾನೆ.
ಜುಲೈ 30ಕ್ಕೆ ಅದ್ಧೂರಿ ಬಿಡುಗಡೆ – ಅಡ್ವಾನ್ಸ್ ಬುಕಿಂಗ್ ಭರಪೂರ
ಕನ್ನಡದ ಕೆಜಿಎಫ್, ಕಾಂತಾರ, ಸಪ್ತ ಸಾಗರದಾಚೆ ಎಲ್ಲೊ ಸಿನಿಮಾಗಳು ವಿದೇಶಗಳಲ್ಲಿ ಸೃಷ್ಟಿಸಿದ್ದ ತರಂಗಗಳ ಬೆನ್ನಲ್ಲೇ, ಇದೀಗ ಹಾಲಿವುಡ್ ಸಿನಿಮಾ ಒಂದು ಕನ್ನಡ ಆವೃತ್ತಿಯಲ್ಲೂ ಭಾರಿ ಪ್ರಮಾಣದಲ್ಲಿ ತೆರೆಕಾಣುತ್ತಿದೆ.
ಬಿಡುಗಡೆ ದಿನಾಂಕ: ಜುಲೈ 30
ಲಭ್ಯವಿರುವ ಭಾಷೆಗಳು: ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ.
ಟಿಕೆಟ್ ಬುಕಿಂಗ್: ಭಾರತದಾದ್ಯಂತ ಅಡ್ವಾನ್ಸ್ ಟಿಕೆಟ್ ಬುಕಿಂಗ್ನಲ್ಲಿ ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ ಹೊಸ ದಾಖಲೆ ಬರೆಯುತ್ತಿದೆ.

