ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(KPSC) ನಡೆಸಿದ್ದ ರಾಜ್ಯದ ಪಶು ವೈದ್ಯಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಆಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಜನ ಪಕ್ಷಪಾತ ಆರೋಪ ಸಂಬಂಧ ಈಗಾಗಲೇ ಅಮಾನತುಗೊಂಡಿರುವ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಕೆಪಿಎಸ್ಸಿ ಸದಸ್ಯರು, ಅಧಿಕಾರಿಗಳು ಸೇರಿ ನಾಲ್ವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಶಿವಶಂಕರಪ್ಪ ಸಾಹುಕಾರ್ ಅವರನ್ನೇ ಮೊದಲನೇ ಆರೋಪಿಯನ್ನಾಗಿ ಮಾಡಲಾಗಿದೆ. ಪಶುವೈದ್ಯ ಪದವಿಯಲ್ಲಿ ಸಾಧಾರಣ ಸಾಧನೆ ಮಾಡಿದ ಅಭ್ಯರ್ಥಿಗಳು 450ಕ್ಕೂ ಹೆಚ್ಚು ಅಂಕಗಳಿಸಿ ಅರ್ಹತೆ ಪಡೆದುಕೊಂಡಿದ್ದರು. ಶಿವಶಂಕರಪ್ಪ ಸಾಹುಕಾರ್ ಸಂಬಂಧಿ ಪದವಿಯಲ್ಲಿ ಎರಡು ಬಾರಿ ಫೇಲಾಗಿ ಬಳಿಕ ಪಾಸ್ ಆಗಿದ್ದರು. ಈಗ ಗರಿಷ್ಠ ಅಂಕ ಪಡೆದುಕೊಂಡಿದ್ದಾರೆ. ಈ ರೀತಿ ಭಾರಿ ಅಕ್ರಮಗಳು ನಡೆದಿದೆ. ಶಿವಶಂಕರಪ್ಪ ಅವರ ಸಂಬಂಧಿ ಸೂಗುರೇಶ್ ಸೇರಿದಂತೆ 24 ಅಭ್ಯರ್ಥಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ.
ಒಎಂಆರ್ ಶೀಟ್ ಟ್ಯಾಂಪರಿಂಗ್ ಮಾಡಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. 2024ರ ಜುಲೈ 29ರಂದು ಪಶು ವೈದ್ಯಾಧಿಕಾರಿ 400 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, 2026ರ ಜನವರಿ 8ರಂದು ಪರೀಕ್ಷೆ ನಡೆಸಿ ಜುಲೈ 17ರಂದು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಮತ್ತು ಇತರರು ಸೇರಿಕೊಂಡು ತಮಗೆ ಬೇಕಾದ ಅಭ್ಯರ್ಥಿಗಳು, ಸಂಬಂಧಿಕರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಒಎಂಆರ್ ಶೀಟ್ ಗಳನ್ನು ತಿದ್ದುಪಡಿ ಮಾಡಿ ಆಯ್ಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

