ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಮಹಿಳೆಯೊಬ್ಬಳು ವಿಡಿಯೋ ಕಾಲ್ ವೇಳೆ ಯುವ ಕ್ರಿಕೆಟಿಗನ ಖಾಸಗಿ ವಿಡಿಯೋವನ್ನು ರೆಕಾರ್ಡ್ ಮಾಡಿ, ಅದನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ಸೆಕ್ಸ್ಟಾರ್ಶನ್ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ ಮೂಲದ 20 ವರ್ಷದ ಉದಯೋನ್ಮುಖ ಕ್ರಿಕೆಟಿಗ ಟೂರ್ನಿಯೊಂದರಲ್ಲಿ ಭಾಗವಹಿಸಲು ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ಈ ಘಟನೆ ನಡೆದಿದೆ. ಹೋಟೆಲ್‌ನಲ್ಲಿ ವಾಸವಾಗಿದ್ದಾಗ ಡೇಟಿಂಗ್ ಆ್ಯಪ್ ಮೂಲಕ ಮಹಿಳೆಯೊಬ್ಬಳ ಪರಿಚಯವಾಗಿದ್ದು, ಬಳಿಕ ಇಬ್ಬರೂ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ.ಈ ವೇಳೆ ಮಹಿಳೆ ಯುವಕನ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದು, ನಂತರ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಬೆದರಿಕೆಗೆ ಒಳಗಾದ ಯುವ ಕ್ರಿಕೆಟಿಗ ಆತಂಕದಿಂದ ಹಣ ಕಳುಹಿಸಿದ್ದಾನೆ ಎನ್ನಲಾಗಿದೆ.

ನಂತರ ನಡೆದ ಘಟನೆಯ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿದಾಗ ತಾನು ಸೆಕ್ಸ್ಟಾರ್ಶನ್ (Sextortion) ವಂಚನೆಗೆ ಬಲಿಯಾಗಿರುವುದು ಆತನಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಮಾಹಿತಿ ನೀಡಲಾಗಿದ್ದು, ಸೈಬರ್ ವಂಚಕರ ಜಾಲದ ಬಗ್ಗೆ ತನಿಖೆ ಮುಂದುವರಿದಿದೆ.ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಆ್ಯಪ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಇಂತಹ ಸೆಕ್ಸ್ಟಾರ್ಶನ್ ಪ್ರಕರಣಗಳು ಹೆಚ್ಚುತ್ತಿವೆ. ಅಪರಿಚಿತರೊಂದಿಗೆ ಖಾಸಗಿ ವಿಡಿಯೋ ಕಾಲ್‌ಗಳನ್ನು ನಡೆಸದಂತೆ ಹಾಗೂ ಯಾವುದೇ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳದಂತೆ ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ಯುವ ಆಟಗಾರರು ಇಂತಹ ಸೈಬರ್ ವಂಚನೆಗಳಿಂದ ಎಚ್ಚರಿಕೆಯಿಂದ ಇರಬೇಕು ಎಂದು ಬಿಸಿಸಿಐ (BCCI) ಕೂಡ ಆಟಗಾರರಿಗೆ ಸಲಹೆ ನೀಡಿದ್ದು, ಅನುಮಾನಾಸ್ಪದ ಕರೆಗಳು ಅಥವಾ ಸಂದೇಶಗಳು ಬಂದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದೆ.

