ಕಾಸರಗೋಡು (ಕೇರಳ)- ಉಕ್ರೇನ್‌ನ ಒಡೆಸಾ ಬಂದರಿನ ಬಳಿ ಸರಕು ಹಡಗಿನ ಮೇಲೆ ನಡೆದ ರಷ್ಯಾ ಮಿಲಿಟರಿ ದಾಳಿಯಲ್ಲಿ ಕಾಸರಗೋಡು ಮೂಲದ 26 ವರ್ಷದ ನಾವಿಕ ಅಖಿಲ್ ಜೋಯನ್ ದುರಂತ ಅಂತ್ಯ ಕಂಡಿದ್ದಾರೆ.
ಕುಟುಂಬಕ್ಕೆ ಮಾಹಿತಿ ಇಲ್ಲ, ಮೃತದೇಹ ಹಸ್ತಾಂತರ ಅನಿಶ್ಚಿತ
ಮೃತದೇಹವನ್ನು ಹುಟ್ಟೂರಿಗೆ ತರುವ ಬಗ್ಗೆ ಹಡಗು ಕಂಪನಿಯಿಂದ ಅಥವಾ ವಿದೇಶಾಂಗ ಸಚಿವಾಲಯದಿಂದ ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ ಎಂದು ಅವರ ಕುಟುಂಬ ತೀವ್ರ ಕಳವಳ ವ್ಯಕ್ತಪಡಿಸಿದೆ.
ಉಕ್ರೇನ್‌ನ ಒಡೆಸಾ ಬಂದರಿನಿಂದ ಹೊರಟ ‘ಎಮ್‌ವಿ ಗೋಲ್ಡನ್ ಲಿಯೋ’ (MV Golden Leo) ಎಂಬ ಪಶ್ಚಿಮ ಆಫ್ರಿಕಾದ ಗಿನಿಯಾ-ಬಿಸ್ಸೌ ಧ್ವಜ ಹೊಂದಿದ್ದ ಸರಕು ಹಡಗಿನ ಮೇಲೆ ರಷ್ಯಾದ ಪಡೆಗಳು ಕ್ಷಿಪಣಿ ದಾಳಿ ನಡೆಸಿದ್ದವು.ಹಡಗಿನಲ್ಲಿದ್ದ 17 ಸಿಬ್ಬಂದಿ ಪೈಕಿ ಒಟ್ಟು 10 ಜನರು ಮೃತಪಟ್ಟಿದ್ದು, ಅದರಲ್ಲಿ ನಾವಿಕ ಅಖಿಲ್ ಜೋಯನ್ ಸೇರಿದಂತೆ 4 ಮಂದಿ ಭಾರತೀಯರು ಜೀವ ಕಳೆದುಕೊಂಡಿದ್ದಾರೆ.
ಹಡಗಿನ ಕಂಪನಿಯು ಅಖಿಲ್ ಮೃತಪಟ್ಟಿರುವ ಸುದ್ದಿಯನ್ನು ಕುಟುಂಬಕ್ಕೆ ಈ-ಮೇಲ್ ಹಾಗೂ ಫೋನ್ ಮೂಲಕ ಖಚಿತಪಡಿಸಿದೆಯಾದರೂ, ಮೃತದೇಹ ಸ್ವದೇಶಕ್ಕೆ ತರುವ ಪ್ರಕ್ರಿಯೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ದಾಳಿಯಲ್ಲಿ ಇಬ್ಬರ ಮೃತದೇಹಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಒಂದು ಅಖಿಲ್ ಅವರದ್ದು ಎಂದು ಕಂಪನಿ ಹೇಳಿದೆ. ಆದರೆ ಮೃತದೇಹವನ್ನು ಯಾವಾಗ ವಾಪಸ್ ಕಳುಹಿಸಲಾಗುತ್ತದೆ ಎಂಬ ಬಗ್ಗೆ ಯಾವುದೇ ಸುಳಿವು ನೀಡುತ್ತಿಲ್ಲ.
ಜೋಯನ್ (ಅಖಿಲ್ ಅವರ ತಂದೆ) ಭಾನುವಾರ ಸಂಜೆ ಅಖಿಲ್ ಮಿಸ್ಡ್ ಕಾಲ್ ನೀಡಿದ್ದ ನಂತರ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ಮದುವೆಯ ಕನಸು ಭಗ್ನ:
ಮದುವೆಗೆ ಕಾಯುತ್ತಿದ್ದ ಯುವಕನ ಕನಸು ಭಗ್ನ
ಕೇವಲ ಒಂದು ತಿಂಗಳ ಹಿಂದೆಯಷ್ಟೇ ಅಖಿಲ್ ಅವರ ನಿಶ್ಚಿತಾರ್ಥ ನೆರವೇರಿತ್ತು. ಇನ್ನು ಎರಡು ತಿಂಗಳಲ್ಲಿ ಮದುವೆ ನಿಗದಿಯಾಗಿದ್ದು, ಈ ನಡುವೆಯೇ ಈ ದುರಂತ ಸಂಭವಿಸಿದೆ.
ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತಾನ್, ಜನಪ್ರತಿನಿಧಿಗಳು ಹಾಗೂ ರಾಜ್ಯ ಗೃಹ ಸಚಿವರ ಮೂಲಕ ಭಾರತೀಯ ವಿದೇಶಾಂಗ ಸಚಿವಾಲಯವನ್ನು (MEA) ಸಂಪರ್ಕಿಸಿ ಮೃತದೇಹವನ್ನು ಶೀಘ್ರವಾಗಿ ಹಸ್ತಾಂತರಿಸಲು ಕೇರಳ ಸರ್ಕಾರಗಳು ತುರ್ತು ಕ್ರಮ ಕೈಗೊಳ್ಳುತ್ತಿವೆ.
ನಾವಿಕರ ಸುರಕ್ಷತೆ ಕುರಿತು ಕಳವಳ
ಕಳೆದ ಕೆಲವು ದಿನಗಳಿಂದ ರಷ್ಯಾ-ಉಕ್ರೇನ್ ಸಂಘರ್ಷ ತೀವ್ರಗೊಂಡಿದ್ದು, ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಭಾರತೀಯ ನಾವಿಕರ ಸುರಕ್ಷತೆಯ ಕುರಿತು ದೊಡ್ಡ ಮಟ್ಟದ ಕಳವಳವನ್ನು ಹುಟ್ಟುಹಾಕಿವೆ.

