HomeKarnataka15,000 ಶಾಲಾ ಶಿಕ್ಷಕರ ನೇಮಕಾತಿಗೆ ಸಚಿವ ಸಂಪುಟ ಸಭೆ ಅನುಮೋದನೆ

15,000 ಶಾಲಾ ಶಿಕ್ಷಕರ ನೇಮಕಾತಿಗೆ ಸಚಿವ ಸಂಪುಟ ಸಭೆ ಅನುಮೋದನೆ

ಬೆಂಗಳೂರು: 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಯಿತು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಶೇಷ ಸಚಿವ ಸಂಪುಟಸಭೆಯ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ ಎಂದರು.

ಕರ್ನಾಟಕ ಅಗ್ರಿಟೆಕ್‌ ಮಿಷನ್ 2026 ಅಡಿ ಸ್ಯಾಟಲೈಟ್ ಮೂಲಕ ಹವಾಮಾನ ವಿಶ್ಲೇಷಣೆ ನಡೆಸಿ ಅದರ ಮಾಹಿತಿಯನ್ನು ರೈತರಿಗೆ ಒದಗಿಸುವ ಕೆಲಸ ಮಾಡಲಾಗುವುದು. ಇದರ ಬಗ್ಗೆ ಸಮೀಕ್ಷೆಗೆ ಅಂದಾಜು 36 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಇಲಾಖೆಗೆ ಅನುಮೋದನೆ ನೀಡಲಾಗಿದೆ. ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳು, ರೋಗಭಾದೆ ಸೇರಿದಂತೆ ಅನೇಕ ಮಾಹಿತಿಗಳನ್ನು ಇದರ ಮೂಲಕ ನೀಡಲಾಗುವುದು ಎಂದರು‌.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಸಿಎಂ ಮಾಹಿತಿ ನೀಡಿದರು. ಹಿಂದುಳಿದ ವರ್ಗಗಳ ವಸತಿ ನಿಲಯಗಳಿಗೆ 15 ಸಾವಿರ ಹಾಸಿಗೆ, 7.5 ಸಾವಿರ ಮಂಚಗಳನ್ನು ಖರೀದಿಸಲು 30 ಕೋಟಿ ರೂಪಾಯಿ ಆಡಳಿತಾತ್ಮಕ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಅಲೆಮಾರಿ ಜನಾಂಗದವರಿಗೆ ಸೂರು ಒದಗಿಸಲು ಹಣ ನೀಡಲಾಗುವುದು. 380 ಚದರ ಅಡಿ ವಿಸ್ತ್ರೀರ್ಣದ ಮನೆಗೆ 10 ಲಕ್ಷ ನೀಡಲಾಗುವುದು. ಅಗತ್ಯತೆ ಇರುವ ಕಡೆ ಈ ಯೋಜನೆ ಜಾರಿಗೊಳಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿಗೆ ಅಗತ್ಯ ಉಪಕರಣಗಳ ಖರೀದಿಗೆ 16.56 ಕೋಟಿ ಅನುದಾನವನ್ನು ರಾಜ್ಯ ಬಜೆಟ್ ಹಾಗೂ 5 ಕೋಟಿಯನ್ನು ಆಂತರಿಕ ಸಂಪನ್ಮೂಲಗಳಿಂದ ಸಂಗ್ರಹಿಸಿ 21.56 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ಬೆಂಗಳೂರು ಮೆಡಿಕಲ್ ಕಾಲೇಜಿನ ನೂತ‌ನ ಹಾಸ್ಟಲ್ ಕಟ್ಟಡ ನಿರ್ಮಾಣಕ್ಕೆ ಅಂದಾಜು 80 ಕೋಟಿ ಮೊತ್ತಕ್ಕೆ ಒಪ್ಪಿಗೆ ನೀಡಲಾಗಿದೆ. ಅದರ ದುರಸ್ತಿಗೆ 80 ಕೋಟಿ ಮೇಲೆ ಖರ್ಚಾಗಲಿತ್ತು. ನಾನು ಹೊಸ ಕಟ್ಟಡವನ್ನೇ ನಿರ್ಮಾಣ ಮಾಡಿ ಎಂದು ತಿಳಿಸಿದ್ದೇನೆ. ಕಾಲೇಜಿನ ಸುತ್ತಳತೆಯ 3-4 ಕಿಮೀನಲ್ಲಿ ಬೇರೆ ಸ್ಥಳ ಹುಡುಕಿ ಹಾಸ್ಟೆಲ್ ನಿರ್ಮಾಣಕ್ಕೆ ನೀಡಲಾಗುವುದು ಎಂದರು‌.

ಯಾನಗಂಟಿ, ನರಿಬೋಳ, ಗೊನ್ವಾರ, ಕಡಕೊಳ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿ- 156 ಅಭಿವೃದ್ಧಿಗೆ 25 ಕೋಟಿ ರೂಪಾಯಿ ಮೊತ್ತದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಲೋಕಭವನದಲ್ಲಿ ಆಡಳಿತ ಭವನ ನಿರ್ಮಾಣಕ್ಕೆ ಅಂದಾಜು ವೆಚ್ಚ 27 ಕೋಟಿ ರೂಪಾಯಿಗೆ ಅನುಮತಿ ಹಾಗು ಐಐಟಿ ರಾಯಚೂರಿನಲ್ಲಿ ಎಐ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲು 12 ಕೋಟಿ ರೂಪಾಯಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ ಎಂದರು.

180 ಕೋಟಿ ರೂಪಾಯಿ ವೆಚ್ಚದಲ್ಲಿ ಬೀದರ್ ನ ಕಾರಿಂಜ ಬಲದಂಡೆ ಕಾಲುವೆಯ ಅಭಿವೃದ್ಧಿ ಮಾಡಲಾಗುವುದು. ನಂಜಗೂಡಿನಿಂದ ಕಪಿಲಾ ನದಿಗೆ ಕೊಳಚೆ ನೀರು ಹೋಗುವುದನ್ನು ತಪ್ಪಿಸಲು ಹಾಗೂ ಪ್ರವಾಹ ಅಪಾಯ ತಗ್ಗಿಸಲು 70 ಕೋಟಿ ವೆಚ್ಚದಲ್ಲಿ ನೀರಾವರಿ ಇಲಾಖೆಯಿಂದ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದರು.

ಕೆಪಿಎಸ್ ಇ ಅಧ್ಯಕ್ಷರನ್ನು ರಾಜ್ಯಪಾಲರು ಅಮಾನತು ಮಾಡಿದ್ದರು. ಇದಕ್ಕೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ‌ನಾನು ಇದರ ಬಗ್ಗೆ ಕೂಲಂಕುಷವಾಗಿ ಅವಲೋಕಿಸಿದಾಗ ಅಮಾನತು ತೀರ್ಮಾನ ಸರಿಯಿದೆ ಎಂದು ಎನಿಸಿತು. ಅದಕ್ಕೆ ಒಪ್ಪಿಗೆ ನೀಡಲಾಗಿದೆ.

244 ಕೋಟಿ ರೂಪಾಯಿ ವೆಚ್ಚದಲ್ಲಿ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿಯ 114 ಕೆರೆಗಳು ಹಾಗೂ ಕುಡಿಯುವ ನೀರಿಗಾಗಿ ಗಾಯತ್ರಿ ಜಲಾಶಯವನ್ನು ತುಂಬಿಸಲಾಗುವುದು. ಇದು ದಿವಂಗತ ಸಚಿವರಾದ ಸುಧಾಕರ್ ಅವರ ಕನಸಿನ ಯೋಜನೆಯಾಗಿತ್ತು ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular