ರಾಯಪುರ: ಇ20 ಪೆಟ್ರೋಲ್ ಗೆ ಸಂಬಂಧಿಸಿದಂತೆ ದೇಶವ್ಯಾಪಿ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಛತ್ತೀಸ್ಗಢದ ಜಿಲ್ಲಾ ಗ್ರಾಹಕರ ನ್ಯಾಯಾಲಯ ಇ20 ಪೆಟ್ರೋಲ್ ಬಳಕೆಯಿಂದ ಹಾನಿಗೀಡಾಗಿರುವ ಮಾರುತಿ ಗ್ರಾಂಡ್ ವಿತಾರಾ ಸ್ಟ್ರಾಂಗ್ ಹೈಬ್ರಿಡ್ ಕಾರು ಬದಲಿಸಿ ಹೊಸ ಕಾರು ನೀಡುವಂತೆ ಮಾರುತಿ ಸುಜುಕಿ ಕಾರುಗಳ ಡೀಲರ್ ಗೆ ನಿರ್ದೇಶಿಸಿದೆ.
ಇ20 ವಿವಾದ ಆರಂಭವಾದ ಬಳಿಕ ಗ್ರಾಹಕರ ಪರವಾಗಿ ಬಂದ ಮೊದಲ ತೀರ್ಪು ಇದಾಗಿದೆ. ರಾಯ್ಪುರದ ಡಾ. ಪ್ರೇಮರಾಜ್ ದೇವ್ತಾ ಅವರು ಮಾರುತಿ ಸುಜುಕಿ ಗ್ರಾಂಡ್ ವಿತಾರಾ ಸ್ಟ್ರಾಂಗ್ ಹೈಬ್ರಿಡ್ ಪ್ಲಸ್ ವಾಹನ ಖರೀದಿಸಿದ್ದರು. ಇ20 ಇಂಧನ ಬಳಸಿದ ನಂತರ ಈ ಕಾರ್ ನಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾಗಿದ್ದವು.
ವಾಹನ ಖರೀದಿ ವೇಳೆ ಈ ಕಾರು ಸಂಪೂರ್ಣವಾಗಿ ಇ20 ಇಂಧನಕ್ಕೆ ಪೂರಕವಾಗಿಲ್ಲ ಎಂದು ಕಂಪನಿಯವರು ತಿಳಿಸಿರಲಿಲ್ಲ ಎಂದು ಆರೋಪಿಸಿ ಡಾ. ಪ್ರೇಮರಾಜ್ ದೇವ್ತಾ ರಾಯ್ಪುರದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 45 ದಿನದೊಳಗೆ ಇ20 ಇಂಧನದೊಂದಿಗೆ ಹೊಂದಾಣಿಕೆಯಾಗುವ ಹೊಸ ಕಾರು ಮತ್ತು 1.10 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ.

