ಬೆಂಗಳೂರು: ಪಿತೃತ್ವ ಖಾತ್ರಿಗೆ ಡಿಎನ್ಎ ಪರೀಕ್ಷೆಯಿಂದ ಗೌಪ್ಯತೆಯ ಹಕ್ಕು ಉಲ್ಲಂಘನೆ ಆಗದು ಎಂದು ಹೈಕೋರ್ಟ್ ಆದೇಶಿಸಿದೆ.
ವೈಜ್ಞಾನಿಕ ವಿಧಾನಗಳಿಂದ ಪಿತೃತ್ವ ಖಾತ್ರಿ ಪಡೆದುಕೊಳ್ಳುವುದಕ್ಕೆ ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ. ಮಕ್ಕಳು ತಮ್ಮ ಆಸ್ತಿ ವಿಭಜನೆಗಾಗಿ ಪ್ರಕರಣ ಸಲ್ಲಿಸಲು ತನ್ನ ಮೂಲವನ್ನು ತಿಳಿಯುವ ಪ್ರಯತ್ನದಲ್ಲಿ ಡಿಎನ್ಎ ಪರೀಕ್ಷೆಗೊಳಪಡಿಸುವುದು ಗೌಪ್ಯತೆಯ ಹಕ್ಕಿನ ಮೇಲೆ ದಾಳಿ ಅಥವಾ ಉಲ್ಲಂಘನೆ ಎನ್ನಲಾಗದು ಎಂದು ಹೈಕೋರ್ಟ್ ತಿಳಿಸಿದೆ.
ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಶಿವಣ್ಣ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟಿಲ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಶಿವಣ್ಣ ವಿಚಾರಣಾ ನ್ಯಾಯಾಲಯದಲ್ಲಿ ಪಾಟಿ ಸವಾಲು ಸಂದರ್ಭದಲ್ಲಿ ಪರೀಕ್ಷೆಗೆ ಸಿದ್ಧವಿರುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. ಒಂದು ಬಾರಿ ಒಪ್ಪಿಗೆ ನೀಡಿದ ಮೇಲೆ ಈಗ ಅದು ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ವಾದಿಸುವುದು ಕಾನೂನುಬಾಹಿರ ಎಂದು ಹೈಕೋರ್ಟ್ ಹೇಳಿದೆ. ಪ್ರಕರಣದಲ್ಲಿ ಅರ್ಜಿದಾರನ ಹೆಸರು ಹೆಚ್.ಸಿ. ಶಿವಣ್ಣ ಎಂಬುದಾಗಿದೆ. ಆದರೆ, ಶಿವಣ್ಣ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದ್ದರಿಂದ ಅರ್ಜಿದಾರರು ಮತ್ತು ಪ್ರತಿವಾದಿಗಳ ನಡುವಿನ ಜೈವಿಕ ಸಂಬಂಧ ಖಚಿತಪಡಿಸಿಕೊಳ್ಳಲು ಸಲ್ಲಿಸಲಾದ ಪುರಾವೆಗಳು ಸಾಕಾಗುವದಿಲ್ಲ ಎಂಬುದು ಸ್ಪಷ್ಟವಾಗಿದೆ. ಡಿಎನ್ಎ ಪರೀಕ್ಷೆ ಮಾಡುವಂತೆ ಅರ್ಜಿದಾರರೇ ಸ್ವತಃ ಮನವಿ ಮಾಡುತ್ತಾರೆ ಎಂಬುದನ್ನು ಗಮನಿಸಬೇಕು. ಹೀಗಾಗಿ ಗೌಪ್ಯತೆ ಆಕ್ರಮಣ ಅಥವಾ ನ್ಯಾಯ ಸಮ್ಮತತೆಗೆ ಕಳಂಕ ತರುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.
ಹೆಚ್.ಎಸ್. ಸೋಮೇಶ್ ಮತ್ತು ಹೆಚ್.ಎಸ್. ಮಂಜುಳಾ ಎಂಬವರು ಶಿವಣ್ಣ ತಮ್ಮ ತಂದೆಯಾಗಿದ್ದು, ತಮಗೆ ಆಸ್ತಿಯಲ್ಲಿ ಪಾಲು ಕೊಡಬೇಕು ಎಂದು 2013ರಲ್ಲಿ ನಂಜನಗೂಡು ಕೋರ್ಟ್ ನಲ್ಲಿ ಸಿವಿಲ್ ದಾವೆ ಹೂಡಿದ್ದರು. ಆದರೆ ಶಿವಣ್ಣ ಈ ಇಬ್ಬರು ಮಕ್ಕಳು ತನಗೆ ಜನಿಸಿದವರಲ್ಲ, ಇವರು ಮಹದೇವಮ್ಮ ಮತ್ತು ಹೆಚ್.ಸಿ. ಶಿವಣ್ಣ ಎನ್ನುವ ಬೇರೆ ವ್ಯಕ್ತಿಗೆ ಜನಿಸಿದವರು ಎಂದು ವಾದಿಸಿ ಪಿತೃತ್ವ ನಿರಾಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಮಕ್ಕಳು ಡಿಎನ್ಎ ಪರೀಕ್ಷೆ ಕೋರಿ ಅರ್ಜಿ ಸಲ್ಲಿಸಿದ್ದು, ವಿಚಾರಣಾ ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರ ಶಿವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು.

