ಬೆಂಗಳೂರು: ನೀರಾವರಿ ಪಂಪ್‌ಸೆಟ್ ಸ್ಥಾವರಗಳಿಂದ ರೂ.10,000 ಠೇವಣಿ ಮೊತ್ತ ಮತ್ತು ಇತರೆ ಅಗತ್ಯ ಶುಲ್ಕಗಳನ್ನು ಪಡೆಯುವ ಸಮಯ ವಿಸ್ತರಣೆ ಮಾಡಲಾಗಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ತಿಳಿಸಿದೆ.
ಬೆವಿಕಂ ವ್ಯಾಪ್ತಿಯಲ್ಲಿ ರೂ.50/- ಅರ್ಜಿ ಶುಲ್ಕ ಮಾತ್ರ ಪಡೆದು ಆರ್ ಆರ್ ಸಂಖ್ಯೆ ನೀಡಿರುವ ನೀರಾವರಿ ಪಂಪ್‌ಸೆಟ್ ಸ್ಥಾವರಗಳಿಂದ ರೂ.10,000/- ಠೇವಣಿ ಮೊತ್ತ ಮತ್ತು ಇತರೆ ಅಗತ್ಯ ಶುಲ್ಕಗಳನ್ನು ಪಡೆಯುವ ಬಗ್ಗೆ ಸೂಚನೆ ನೀಡಲಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ (4) ರಲ್ಲಿ ರೂ.50/- ಅರ್ಜಿ ಶುಲ್ಕ ಮಾತ್ರ ಪಾವತಿಸಿ ಆರ್.ಆರ್ ಸಂಖ್ಯೆ ಪಡೆದಿರುವ ಪಂಪ್ ಸೆಟ್ ಗಳು ಚಾಲನೆಯಲ್ಲಿದ್ದರೆ (500 ಮೀಟರ್ ಒಳಗಿರುವ) ಅಂತಹ ಪಂಪ್ ಸೆಟ್ ಗಳಿಂದ 10,000 ರೂ.ಠೇವಣಿ ಮೊತ್ತವನ್ನು 31ನೇ ಮೇ-2026 ರೊಳಗೆ ನಿಯಮಾನುಸಾರ ಪಡೆಯಲು ಮತ್ತು ಹಾಲಿ ಇರುವ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಲಾಗಿರುತ್ತದೆ.
ಮುಂದುವರೆದು, ಉಲ್ಲೇಖ (5) ಮತ್ತು (6) ರನ್ವಯ ರೂ.50/- ಮಾತ್ರ ಪಾವತಿಸಿರುವ ರೈತರುಗಳಿಂದ ನಿಯಮಾನುಸಾರ ರೂ.10000/- ಮತ್ತು ಇತರೆ ಠೇವಣಿಗಳನ್ನು ಪಾವತಿಸಲು 31ನೇ ಆಗಸ್ಟ್-2026 ರವರೆಗೆ ಕಾಲಾವಕಾಶವನ್ನು ವಿಸ್ತರಿಸಲು ಅಧೀಕ್ಷಕ ಇಂಜಿನಿಯರ್ (ವಿ) ತುಮಕೂರು ಮತ್ತು ದಾವಣಗೆರೆ ವೃತ್ತರವರು ಕೋರಿರುವ ಹಿನ್ನಲೆಯಲ್ಲಿ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಬೆವಿಕಂ ರವರ ಅನುಮೋದನೆಯಂತೆ, ಸದರಿ ಅವಧಿಯನ್ನು 31ನೇ ಆಗಸ್ಟ್-2026 ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಲಾಗಿದೆ.


