HomeLatest Newsಮಗಳ ಹತ್ಯೆ ಮಾಡಿದ್ದಾನೆಂದು ತಂದೆ ಅಂದರ್‌ ; 22 ದಿನಗಳ ಬಳಿಕ ಜೀವಂತ ಪ್ರತ್ಯಕ್ಷಳಾಗಿದ್ದನ್ನು ಕಂಡು...

ಮಗಳ ಹತ್ಯೆ ಮಾಡಿದ್ದಾನೆಂದು ತಂದೆ ಅಂದರ್‌ ; 22 ದಿನಗಳ ಬಳಿಕ ಜೀವಂತ ಪ್ರತ್ಯಕ್ಷಳಾಗಿದ್ದನ್ನು ಕಂಡು ಪೊಲೀಸರು ತಬ್ಬಿಬ್ಬು!

ಚಿತ್ರಕಥೆಯನ್ನೂ ಮೀರಿಸುವಂತಹ ಮಹಾರಾಷ್ಟ್ರ ಪೊಲೀಸರ ತನಿಖಾ ಲೋಪವೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ತನ್ನ ಮಗಳನ್ನು ತಾನೇ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂಬ ಆರೋಪದ ಮೇಲೆ ಬರೋಬ್ಬರಿ 22 ದಿನಗಳ ಕಾಲ ಜೈಲು ಕಂಬಿ ಎಣಿಸಿದ್ದ ತಂದೆಯೊಬ್ಬನ ಮುಂದೆಯೇ, ಕೊಲೆಯಾಗಿದ್ದಾಳೆನ್ನಲಾದ ಮಗಳು ಸಜೀವವಾಗಿ ನಡೆದುಕೊಂಡು ಬಂದಿದ್ದಾಳೆ!

ಪೊಲೀಸರ ಅವಸರದ ತನಿಖೆ ಮತ್ತು ಕಸ್ಟಡಿ ದೌರ್ಜನ್ಯದ ಇಡೀ ಹಗರಣ ಈಗ ಬಯಲಾಗಿದ್ದು, ಸ್ವತಃ ಮಹಾರಾಷ್ಟ್ರ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಪೊಲೀಸರ ಈ “ಘೋರ ತಪ್ಪು” ಒಪ್ಪಿಕೊಂಡಿದ್ದಾರೆ.

ಜೈಲಿಗೆ ತಳ್ಳಿದ ಆ ಒಂದು ‘ತಲೆ ಇಲ್ಲದ’ ಶವ !

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಇಡೀ ಪ್ರಕರಣ ಆರಂಭವಾಗಿದ್ದು ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಖಡ್ಕಿ ಗ್ರಾಮದ ದಿನಗೂಲಿ ಕಾರ್ಮಿಕ ಬಾಪುರಾಮ್ ಕಲ್ಮೇಕರ್ (55) ಅವರು ತಮ್ಮ ಮಗಳು ಶಿವಾನಿ ನಾಪತ್ತೆಯಾಗಿದ್ದಾಳೆಂದು ಏಪ್ರಿಲ್ 23 ರಂದು ನೀಡಿದ ದೂರಿನಿಂದ. ಮಗಳು ಕಾಣೆಯಾದ ಕೆಲವೇ ದಿನಗಳಲ್ಲಿ ಪಕ್ಕದ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ನದಿ ದಂಡೆಯ ಬಳಿ ಯುವತಿಯೊಬ್ಬರ ತಲೆ ಇಲ್ಲದ, ಅರ್ಧ ಸುಟ್ಟ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿತ್ತು. ಸುಮಾರು 100 ಮೀಟರ್ ದೂರದಲ್ಲಿ ಕಪಾಲ (ಬುರುಡೆ) ಪತ್ತೆಯಾಗಿತ್ತು.

ಮಹಾರಾಷ್ಟ್ರ ಪೊಲೀಸರು ವಯಸ್ಸಿನ ಅಂದಾಜಿನ ಮೇಲೆ ಅದು ನಾಪತ್ತೆಯಾಗಿದ್ದ ಶಿವಾನಿಯದ್ದೇ ಶವ ಎಂದು ತಾವೇ ತೀರ್ಮಾನಿಸಿದರು. ಯಾವುದೇ ಡಿಎನ್‌ಎ (DNA) ಅಥವಾ ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸದೆ, ನೇರವಾಗಿ ಬಾಪುರಾಮ್ ಮತ್ತು ಅವರ ಮಗ ಅಜಯ್ (28) ಅವರನ್ನು ವಶಕ್ಕೆ ಪಡೆದರು.

ಪೊಲೀಸರು ತಂದೆ ಮತ್ತು ಮಗನನ್ನು ಪ್ರತ್ಯೇಕ ಕೋಣೆಗಳಲ್ಲಿ ಇಟ್ಟು ತೀವ್ರವಾಗಿ ಥಳಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. “ನಿಮ್ಮ ಮಗ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ನನಗೆ ಹೇಳಿದರು, ಅಪ್ಪ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ನನ್ನ ಮಗನಿಗೆ ಹೇಳಿದರು. ಪೆಟ್ಟಿನ ಭೀತಿಯಿಂದ ಮತ್ತು ಪೊಲೀಸರ ಒತ್ತಡ ತಡೆಯಲಾರದೆ ನಾವು ಅವರು ಹೇಳಿದ್ದಕ್ಕೆಲ್ಲ ‘ಹೌದು’ ಎನ್ನಬೇಕಾಯಿತು,” ಎಂದು ಬಾಪುರಾಮ್ ಅಳಲು ತೋಡಿಕೊಂಡಿದ್ದಾರೆ.

ಪೊಲೀಸರು ತಮ್ಮ ಕಲ್ಪನೆಗೆ ತಕ್ಕಂತೆ ಕಥೆಯೊಂದನ್ನು ಸೃಷ್ಟಿಸಿದ್ದರು. ಮಗಳು ಬೇರೊಬ್ಬ ಯುವಕನ ಜೊತೆ ಓಡಿಹೋಗಿದ್ದಕ್ಕೆ ತಂದೆ ಬಿದಿರಿನ ಕೋಲಿನಿಂದ ಹೊಡೆದು ಕೊಂದಿದ್ದಾನೆ, ಶವವನ್ನು 100 ಕಿಲೋಮೀಟರ್ ದೂರ ಬೈಕ್‌ನಲ್ಲಿ ಸಾಗಿಸಿ, ತಲೆ ಕತ್ತರಿಸಿ ಸುಟ್ಟು ಹಾಕಿದ್ದಾನೆ ಎಂದು ಎಫ್‌ಐಆರ್ ದಾಖಲಿಸಿ ಇಬ್ಬರನ್ನೂ ಜೈಲಿಗಟ್ಟಿದ್ದರು.

ಟ್ವಿಸ್ಟ್ ಕೊಟ್ಟ ಮಧ್ಯಪ್ರದೇಶ ಪೊಲೀಸರು!

ಆದರೆ, ಶಿವಾನಿ ಕೊಲೆಯಾಗಿದ್ದಾಳೆ ಎಂದು ಮಹಾರಾಷ್ಟ್ರ ಪೊಲೀಸರು ಹೇಳಿದಾಗ, ಮಧ್ಯಪ್ರದೇಶದ ಪೊಲೀಸರಿಗೆ ಆಕೆ ಯಾರ ಜೊತೆ ಹೋಗಿದ್ದಳೋ ಆ ಯುವಕ ಏನಾದ ಎಂಬ ಸಂಶಯ ಮೂಡಿತು. ತನಿಖೆ ಚುರುಕುಗೊಳಿಸಿದ ಎಂಪಿ ಪೊಲೀಸರು, ನಾಗ್ಪುರದಲ್ಲಿ ಇಬ್ಬರೂ ಒಟ್ಟಿಗೆ ಇರುವುದನ್ನು ಪತ್ತೆಹಚ್ಚಿದರು. ಬಯೋಮೆಟ್ರಿಕ್ ಮತ್ತು ಆಧಾರ್ ವಿವರಗಳ ಮೂಲಕ ಆಕೆ ಜೀವಂತವಾಗಿರುವ ಶಿವಾನಿ ಎಂಬುದನ್ನು ಖಚಿತಪಡಿಸಿಕೊಂಡ ಪೊಲೀಸರು, ಆಕೆಯನ್ನು ಮಹಾರಾಷ್ಟ್ರದ ಜಲಗಾಂವ್ ಜಾಮೋದ್ ಪೊಲೀಸ್ ಠಾಣೆಗೆ ಹಾಜರುಪಡಿಸಿದರು. ಮಗಳು ಜೀವಂತವಾಗಿ ಬರುತ್ತಿದ್ದಂತೆ ಪೊಲೀಸರು ಸೃಷ್ಟಿಸಿದ್ದ ಸುಳ್ಳು ಕೇಸ್ ಕುಸಿದುಬಿದ್ದಿತು.

ವಿಧಾನಸಭೆಯಲ್ಲಿ ಸಿಎಂ ಒಪ್ಪಿಗೆ, ಅಧಿಕಾರಿಗಳ ಅಮಾನತು

ಈ ಗಂಭೀರ ಲೋಪದ ಬಗ್ಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಭಾರಿ ಗದ್ದಲ ಉಂಟಾಯಿತು. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಇಲಾಖೆಯ ತಪ್ಪು ಒಪ್ಪಿಕೊಂಡು, ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಹಾಗೂ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ. ಅಲ್ಲದೆ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.

ಆದರೆ, ಬಿಡುಗಡೆಯಾಗಿ ಒಂದು ತಿಂಗಳಾದರೂ ತಮಗೆ ಯಾವುದೇ ಪರಿಹಾರವಾಗಲಿ ಅಥವಾ ಪೊಲೀಸರಿಂದ ಕನಿಷ್ಠ ಕ್ಷಮಾಪಣೆಯಾಗಲಿ ಸಿಕ್ಕಿಲ್ಲ ಎಂದು ಬಾಪುರಾಮ್ ಹೇಳಿದ್ದಾರೆ. ಜೈಲಿಗೆ ಹೋದ ಕಾರಣ ಇಡೀ ಕುಟುಂಬ ಬೀದಿಗೆ ಬಿದ್ದಿದ್ದು, ಹಳ್ಳಿಗರ ಮುಂದೆ ತಲೆ ಎತ್ತಿ ನಡೆಯಲು ಹೆದರುತ್ತಿದ್ದಾರೆ.

ರಹಸ್ಯವಾಗಿ ಉಳಿದ ಆ ‘ಅನಾಮಧೇಯ’ ಹೆಣ ಯಾರದ್ದು?

ಪ್ರಕರಣ ಮುಕ್ತಾಯಗೊಂಡಿದ್ದರೂ ಅತ್ಯಂತ ಭಯಾನಕ ಪ್ರಶ್ನೆಯೊಂದು ಹಾಗೇ ಉಳಿದಿದೆ. ಬುಲ್ಧಾನಾದಲ್ಲಿ ಪತ್ತೆಯಾದ ಆ ಅರ್ಧ ಸುಟ್ಟ, ತಲೆ ಇಲ್ಲದ ಮಹಿಳೆಯ ಶವ ಯಾರದ್ದು? ಆಕೆಯನ್ನು ಕೊಂದ ಕ್ರೂರಿ ಯಾರು? ಪೊಲೀಸರು ಬದುಕಿರುವ ಹುಡುಗಿಯ ಹೆಸರನ್ನು ಆ ಶವಕ್ಕೆ ಹಚ್ಚಿ ಕೈತೊಳೆದುಕೊಂಡಿದ್ದರಿಂದ, ನಿಜವಾದ ಕೊಲೆಗಡುಕ ಇನ್ನೂ ರಾಜಾರೋಷವಾಗಿ ತಿರುಗಾಡುತ್ತಿದ್ದಾನೆ ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular