HomeLatest Newsತೆಲುಗು ಚಿತ್ರ ನೋಡಿ ಹಾಡಿಹೊಗಳಿದ ಶಿವಣ್ಣ: ಕನ್ನಡ ಚಿತ್ರಗಳಾದ ಗ್ರಾಮಾಯಣ, ಮದರ್ ಪ್ರಾಮಿಸ್ ನೋಡಿ ಎಂದ...

ತೆಲುಗು ಚಿತ್ರ ನೋಡಿ ಹಾಡಿಹೊಗಳಿದ ಶಿವಣ್ಣ: ಕನ್ನಡ ಚಿತ್ರಗಳಾದ ಗ್ರಾಮಾಯಣ, ಮದರ್ ಪ್ರಾಮಿಸ್ ನೋಡಿ ಎಂದ ನೆಟ್ಟಿಗರು; ಇಷ್ಟು ಹಾರಾಟ ಬೇಕಾ?

ವರ್ಷದ ಮೊದಲಾರ್ಧದಲ್ಲಿ ಸರಿಯಾದ ಹಿಟ್ ಇಲ್ಲದೇ ಸೊರಗಿದ್ದ ಕನ್ನಡ ಚಿತ್ರರಂಗಕ್ಕೆ ದ್ವಿತೀಯಾರ್ಧವಾದರೂ ಕೈಹಿಡಿಯಲಿದೆಯಾ ಎಂಬ ಪ್ರಶ್ನೆ ಹಾಗೂ ಆತಂಕ ಪ್ರೇಕ್ಷಕರಲ್ಲಿತ್ತು.

ಇನ್ನು ದ್ವಿತೀಯಾರ್ಧದಲ್ಲಿ ಭರವಸೆ ಹುಟ್ಟುಹಾಕಿದ್ದ ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿರುವುದು ಅದೇ ಪ್ರೇಕ್ಷಕರಲ್ಲಿ ಗೆಲುವಿನ ಭರವಸೆಯನ್ನೂ ಸಹ ಹುಟ್ಟುಹಾಕಿದೆ. ಆ ಸಾಲಿಗೆ ಸೇರಿದ ಎರಡು ಚಿತ್ರಗಳು ಕಳೆದ ವಾರ ತೆರೆಕಂಡ ಗ್ರಾಮಾಯಣ ಹಾಗೂ ಈ ವಾರ ಬಿಡುಗಡೆಯಾಗಿರುವ ಮದರ್ ಪ್ರಾಮಿಸ್.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡೂ ಚಿತ್ರಗಳಿಗೂ ಚಿತ್ರ ನೋಡಿದ ಪ್ರೇಕ್ಷಕ ಒಳ್ಳೆಯ ಪ್ರತಿಕ್ರಿಯೆಯನ್ನೇ ನೀಡಿದ್ದು, ತಕ್ಕ ಫಲಿತಾಂಶಗಳನ್ನು ಪಡೆದುಕೊಂಡಿವೆ. ಇನ್ನು ಇದೇ ವೇಳೆ ಪರಭಾಷೆಗಳ ಚಿತ್ರಗಳೂ ಸಹ ಬಿಡುಗಡೆಯಾಗಿದ್ದು, ತೆಲುಗಿನ ಅಖಿಲ್ ಅಕ್ಕಿನೇನಿ ನಟನೆಯ ಲೆನಿನ್ ಈ ಪೈಕಿಯೊಂದು.

ಸಾಲು ಸಾಲು ಚಿತ್ರ ಮಾಡಿದರೂ ಗೆಲ್ಲದ ಅಖಿಲ್ ಲೆನಿನ್ ಮೂಲಕ ಗೆದ್ದಿದ್ದಾರೆ ಎನ್ನಲಾಗುತ್ತಿದ್ದು, ಆ ಚಿತ್ರ ಸಹ ಒಳ್ಳೆಯ ವಿಮರ್ಶೆಯನ್ನು ಗಿಟ್ಟಿಸಿಕೊಂಡಿದೆ. ಸದ್ಯ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರದೇ ದಕ್ಷಿಣ ಭಾರತದ ಸೂಪರ್ ಸ್ಟಾರ್ ಆಗಿರುವ ಶಿವ ರಾಜ್‌ಕುಮಾರ್ ಸಹ ಈ ಲೆನಿನ್ ಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿದ್ದಾರೆ.

ಚಿತ್ರ ನೋಡಿದ ಬಳಿಕ ಶಿವಣ್ಣ ಒಂದೊಳ್ಳೆ ಚಿತ್ರ ಮೂಡಿಬಂದಿದೆ ಎಂದು ವಿಡಿಯೊ ಮೂಲಕ ಕಲಾವಿದರು ಹಾಗೂ ನಿರ್ದೇಶಕರನ್ನು ಹಾಡಿ ಹೊಗಳಿದ್ದಾರೆ. ಈ ವಿಡಿಯೊವನ್ನು ಚಿತ್ರ ವಿತರಕರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಬೆನ್ನಲ್ಲೇ ಅನೇಕ ನೆಟ್ಟಿಗರು ಶಿವಣ್ಣನ ನಡೆಯನ್ನು ಖಂಡಿಸಿದ್ದಾರೆ.

ಕನ್ನಡ ಚಿತ್ರಗಳಾದ ಗ್ರಾಮಾಯಣ ಹಾಗೂ ಮದರ್ ಪ್ರಾಮಿಸ್ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವಾಗ ತೆಲುಗು ಚಿತ್ರ ಮಾತ್ರ ನೋಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಬೇಸರ ಹೊರಹಾಕಿದ್ದಾರೆ. ಇನ್ನೂ ಕೆಲವರು ಪರಭಾಷೆಯಲ್ಲಿ ಯಶಸ್ಸು ಸಿಕ್ಕ ಕೂಡಲೇ ಹೀಗೆ ಬದಲಾಗಿಬಿಡುತ್ತಾರೆ ಎಂದೂ ಸಹ ಕಾಮೆಂಟ್ ಮಾಡಿದ್ದಾರೆ.

ಅಸಲಿಯತ್ತಿಗೆ ಶಿವರಾಜ್‌ಕುಮಾರ್ ಗ್ರಾಮಾಯಣ ಚಿತ್ರವನ್ನು ಈಗಾಗಲೇ ಚಿತ್ರಮಂದಿರಕ್ಕೆ ತೆರಳಿ ವೀಕ್ಷಿಸಿದ್ದಾರೆ. ಇನ್ನು ಧನಂಜಯ್‌ಗೆ ಶಿವರಾಜ್‌ಕುಮಾರ್ ಎಷ್ಟು ಬೆಂಬಲ ನೀಡುತ್ತಾ ಬಂದಿದ್ದಾರೆ ಎಂಬುದನ್ನು ಸ್ವತಃ ಡಾಲಿಯೇ ಅನೇಕ ಬಾರಿ ಹೇಳಿಕೊಂಡಿದ್ದಾರೆ.

ಅಲ್ಲದೇ ಶಿವ ರಾಜ್‌ಕುಮಾರ್ ತಮ್ಮ ಖಾತೆಯಲ್ಲಿ ಎಲ್ಲಿಯೂ ಈ ವಿಡಿಯೊವನ್ನು ಪೋಸ್ಟ್ ಮಾಡಿಕೊಂಡಿಲ್ಲ. ಬದಲಾಗಿ ಲೆನಿನ್ ಚಿತ್ರದ ಕರ್ನಾಟಕ ವಿತರಕರು ಶಿವಣ್ಣ ಬಳಿ ಚಿತ್ರ ವೀಕ್ಷಣೆ ಮಾಡಿಸಿದ್ದಾರೆ. ಕನ್ನಡದ ಚಿತ್ರತಂಡಗಳು ಸಹ ಶಿವಣ್ಣ ಅವರನ್ನು ಆಹ್ವಾನಿಸಿ ಚಿತ್ರ ನೋಡಿ ಎಂದರೆ ಇದೇ ನಡೆ ಅವರಿಂದ ಇರಲಿದೆ. ಏಕೆಂದರೆ ಅನೇಕ ಕನ್ನಡ ಚಿತ್ರಗಳನ್ನು ಶಿವಣ್ಣ ನೋಡಿ ಬೆಂಬಲಿಸಿದ್ದಾರೆ.

ಹೀಗಾಗಿ ಕೇವಲ ಒಂದು ತೆಲುಗು ಚಿತ್ರವನ್ನು ನೋಡಿ ಹೊಗಳಿದ್ದಕ್ಕೆ ಇಷ್ಟೆಲ್ಲ ಕಾಮೆಂಟ್ ಮಾಡುವ ಹಾಗೂ ತಾರತಮ್ಯ ಎಂದು ಹಾರಾಡುವ ಅಗತ್ಯವಿಲ್ಲ ಎಂದೇ ಹೇಳಬಹುದು.

View tweet

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular