ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಸಂಬಂಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರಿಗೆ ಲೋಕಾಯುಕ್ತ ಪೊಲೀಸರು ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಸಾವಿರಾರು ಪುಟಗಳ ದಾಖಲೆ ಸಹಿತ ಲೋಕಾಯುಕ್ತ ಪೊಲೀಸರು ಗುರುವಾರ ಲೋಕಭವನಕ್ಕೆ ಕೋರಿಕೆ ಸಲ್ಲಿಸಿದ್ದಾರೆ.
2018 ರಲ್ಲಿ ಐಎಂಎ ಕಂಪನಿ ವಂಚನೆ ಸಂಬಂಧ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಇಡಿ ದಾಳಿ ನಡೆಸಿದ್ದು ಅಕ್ರಮ ಆಸ್ತಿ ಸಂಪಾದನೆ ಶಂಕೆ ಇದ್ದು, ತನಿಖೆ ನಡೆಸುವಂತೆ ಅಂದಿನ ಎಸಿಬಿಗೆ ಇಡಿ ಸೂಚಿಸಿತ್ತು. ತನಿಖೆ ಪ್ರಾರಂಭವಾದ ಬಳಿಕ ಎಸಿಬಿ ರದ್ದಾಗಿ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದರು.
ಆದಾಯ ಮೀರಿ 25 ಕೋಟಿ ರೂ.ನಷ್ಟು ಜಮೀರ್ ಅಹಮದ್ ಆಸ್ತಿ ಗಳಿಸಿರುವುದಕ್ಕೆ ತನಿಖೆಯಲ್ಲಿ ಪುರಾವೆ ಸಿಕ್ಕಿದೆ. ಚಾರ್ಜ್ ಶೀಟ್ ಸಲ್ಲಿಸಲು ಪ್ರಾಸಿಕ್ಯೂಷನ್ ಅನುಮತಿ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತ ಮನವಿ ಮಾಡಿದೆ ಎಂದು ಹೇಳಲಾಗಿದೆ.

