HomeKarnatakaಪಂಚಾಯಿತಿ ಅಧ್ಯಕ್ಷ ಸ್ಥಾನದಿಂದ ಸಿಎಂ ಹುದ್ದೆವರೆಗೇರಿದ ನನಗೆ ಆಡಳಿತದ ಎಲ್ಲಾ ಹಂತ ಗೊತ್ತಿದೆ, ಅಭಿವೃದ್ಧಿ ವಿಚಾರದಲ್ಲಿ...

ಪಂಚಾಯಿತಿ ಅಧ್ಯಕ್ಷ ಸ್ಥಾನದಿಂದ ಸಿಎಂ ಹುದ್ದೆವರೆಗೇರಿದ ನನಗೆ ಆಡಳಿತದ ಎಲ್ಲಾ ಹಂತ ಗೊತ್ತಿದೆ, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ನೆಪ ಕೇಳುವುದಿಲ್ಲ: ಸಿಎಂ ಡಿ.ಕೆ. ಶಿವಕುಮಾರ್

ಕಲಬುರಗಿ: ಪರಿಶುದ್ಧ, ಜನಪರ ಮತ್ತು ಸಮಾನತೆಯ ಆಡಳಿತವೇ ನಮ್ಮ ಗುರಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕಲಬುರಗಿಯಲ್ಲಿ ಅವರು ಪ್ರಾದೇಶಿಕ ವಿಭಾಗ ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಬರ ಪರಿಸ್ಥಿತಿ ಅವಲೋಕನ, ಜನ‌ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಹಾಗೂ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿ, ಅಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿದರು.

ಅಧಿಕಾರಿಗಳಿಗೆ ನೀಡಿದ ಪ್ರಮುಖ ಸಲಹೆ – ಸೂಚನೆಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

– ಪರಿಶುದ್ಧ ಆಡಳಿತ, ಸರ್ವರನ್ನೂ ಒಳಗೊಳ್ಳುವ ಅಭಿವೃದ್ಧಿ ಮತ್ತು ಕಟ್ಟಕಡೆಯ ವ್ಯಕ್ತಿಗೂ ಅವರ ನಾಗರಿಕ ಹಕ್ಕುಗಳನ್ನು ತಲುಪಿಸುವುದು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ಈ ಗುರಿ ಸಾಧಿಸಲು ಅಧಿಕಾರಿ ವರ್ಗ ಅತ್ಯಂತ ಕ್ರಿಯಾಶೀಲವಾಗಿ, ಜನಪರವಾಗಿ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.

– ನಾನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷನಾಗಿ ಆರಂಭಿಸಿ ಮುಖ್ಯಮಂತ್ರಿ ಹುದ್ದೆಯವರೆಗೆ ಎಲ್ಲಾ ಹಂತಗಳನ್ನು ದಾಟಿಕೊಂಡು ಬಂದಿದ್ದೇನೆ. ಹೀಗಾಗಿ ಆಡಳಿತದ ಪ್ರತಿಯೊಂದು ಹಂತದಲ್ಲಿ ಏನು ನಡೆಯುತ್ತದೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ನೆಪಗಳನ್ನು ನಾನು ಕೇಳಲು ಸಿದ್ಧನಿಲ್ಲ. ಫಲಿತಾಂಶವೇ ಮುಖ್ಯ. ಅಧಿಕಾರಿಗಳು ಜನಪರವಾಗಿ ಕೆಲಸ ಮಾಡದಿದ್ದರೆ, ಜನರ ಪರವಾಗಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವುದು ನನಗೆ ಅನಿವಾರ್ಯವಾಗುತ್ತದೆ.

– ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಯಾರು ಒಬ್ಬರೂ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು. ಇಲ್ಲಿ ರಾಜಕಾರಣ ಮುಖ್ಯವಲ್ಲ; ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕು ರಕ್ಷಿಸುವುದು ಸರ್ಕಾರ ಮತ್ತು ಆಡಳಿತದ ಜವಾಬ್ದಾರಿ. ಪ್ರತಿಯೊಂದು ಮನೆಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ ಅರ್ಹ ಮತದಾರರ ಹೆಸರನ್ನು ಖಚಿತಪಡಿಸಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ.

– ದೇಶದಾದ್ಯಂತ ಮಳೆಯ ಪರಿಸ್ಥಿತಿ ಕುರಿತು ಆತಂಕ ವ್ಯಕ್ತವಾಗುತ್ತಿರುವ ನಡುವೆಯೂ ರಾಜ್ಯದಲ್ಲಿ ಪರಿಸ್ಥಿತಿ ಸಮಾಧಾನಕರವಾಗಿದೆ. ಬರಗಾಲ ಇರಲಿ, ಇಲ್ಲದಿರಲಿ. ಯಾವ ಕಾಲದಲ್ಲೂ ಕುಡಿಯುವ ನೀರಿಗೆ ತೊಂದರೆ ಆಗದಂತೆ ನಾವು ಕ್ರಮ ವಹಿಸುತ್ತೇವೆ. ಅಧಿಕಾರಿಗಳು ಕುಡಿಯುವ ನೀರಿನ ಶಾಶ್ವತ ಪರಿಹಾರದ ಕಡೆ ನಿಮ್ಮ ಅನುಭವ ಮತ್ತು ತಿಳಿವಳಿಕೆ ಹಾಗೂ ವಾಸ್ತವ ಸಂಗತಿಗಳನ್ನು ಉಪಯೋಗಿಸಿ ಕ್ರಮ ಜರುಗಿಸಬೇಕು.

– ಜಿಲ್ಲಾ ಅಧಿಕಾರಿಗಳು ಎಲ್ಲಾ ತಾಲ್ಲೂಕುಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರೆ, ಮುಕ್ಕಾಲು ಭಾಗ ಕುಡಿಯುವ ನೀರಿನ ಸಮಸ್ಯೆ ನಿಮ್ಮ ಹಂತದಲ್ಲೇ ಬಗೆಹರಿಯುತ್ತದೆ. ಶಾಸಕರು, ಸಚಿವರ ಸೂಚನೆಗೆ ಕಾಯುತ್ತಾ ಕೂರದೆ, ಇತರೆ ಸಮಸ್ಯೆಗಳಿಗಿಂತ ಕುಡಿಯುವ ನೀರಿನ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಿ.

– ಕೃಷ್ಣಾ, ಕಾವೇರಿ ಮತ್ತು ಗೋದಾವರಿ ನದಿಗಳ ಜೋಡಣೆ ಯೋಜನೆಯನ್ನು ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಮುಂದುವರಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರವೂ ಸಕಾರಾತ್ಮಕ ಸ್ಪಂದನೆ ನೀಡಿದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ರಾಜ್ಯದ ಜನರ ಹಿತಾಸಕ್ತಿಯನ್ನು ಮೊದಲ ಆದ್ಯತೆಯಾಗಿ ಇಟ್ಟು ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ತೀರ್ಮಾನಿಸಿದ್ದೇವೆ.

– ವಾತಾವರಣ ವೈಪರೀತ್ಯದಿಂದ ಉಷ್ಣಾಂಶ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಬರದಂತೆ ಏನೇನು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೋ ಎಲ್ಲವನ್ನೂ ಜಿಲ್ಲಾ ಮಟ್ಟದ ಅಧಿಕಾರಿಗಳು ಕೈಗೊಳ್ಳಬೇಕು. ಸರ್ಕಾರ ಕೊಡುವ ಮುನ್ನೆಚ್ಚರಿಕೆ ಕ್ರಮಗಳ ಜಾರಿಯಲ್ಲಿ ಯಾರೂ ಉದಾಸೀನತೆ ತೋರಿಸಬಾರದು.

– ನಮ್ಮ ಸರ್ಕಾರ ನೂರು ದಿನಗಳನ್ನು ಪೂರೈಸುವ ಹೊತ್ತಿಗೆ ವಿನೂತನವಾದ, ಉತ್ತಮ ಯೋಜನೆಗಳನ್ನು ಜಾರಿಗೊಳಿಸುವ ಯೋಜನೆ, ಬ್ಲೂಪ್ರಿಂಟ್‌ ಸಿದ್ದಪಡಿಸಿಕೊಂಡು ಕಾರ್ಯೋನ್ಮುಖವಾಗಿದೆ. ನಮ್ಮ  ನೂರು ದಿನಗಳ ಯೋಜನೆ ನಿಮ್ಮೆಲ್ಲರ ಯೋಜನೆಯಾಗಬೇಕು. ನಾನು ಇಡೀ ರಾಜ್ಯ ಸಂಚಾರ ಮಾಡಿ ಹೊಸಹೊಸ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದೇನೆ. ಅಧಿಕಾರಿಗಳು ಕ್ರಿಯಾಶೀಲರಾಗಿದ್ದಷ್ಟೂ ಒಳ್ಳೆಯದು ಎಂದು ಸಿಎಂ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ್‌,‌ ಈಶ್ವರ ಖಂಡ್ರೆ, ಯು.ಟಿ.ಖಾದರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆರ್ಥಿಕ‌ ಸಲಹೆಗಾರರಾದ ಎಲ್.ಕೆ. ಅತೀಕ್ ಸೇರಿದಂತೆ ಸಂಸದರು, ಶಾಸಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular