ಇಂದಿನ ದಿನಗಳಲ್ಲಿ ನಮ್ಮ ಸ್ಮಾರ್ಟ್‌ಫೋನ್‌ಗಳು ನಮ್ಮ ಸ್ನೇಹಿತರಿಗಿಂತಲೂ ಹೆಚ್ಚು ನಮ್ಮನ್ನು ಅರಿತಿವೆ. ನಾವು ಯಾವಾಗ ಎದ್ದೇಳುತ್ತೇವೆ, ಯಾವಾಗ ಬೇಸರಗೊಳ್ಳುತ್ತೇವೆ, ಯಾವಾಗ ನಿದ್ರೆ ಬಾರದಿರುತ್ತದೆ ಎಂಬುದನ್ನೂ ಅವು ತಿಳಿದಿವೆ.
ಆದರೆ ವರ್ಷಗಳ ಕಾಲ ನಿರಂತರವಾಗಿ ಮೊಬೈಲ್ ಸ್ಕ್ರೋಲ್ ಮಾಡುವುದು, ಚಾಟ್ ಮಾಡುವುದು, ಗೇಮಿಂಗ್, ವೆಬ್‌ಸಿರೀಸ್ ವೀಕ್ಷಿಸುವುದು ಮುಂತಾದ ಅಭ್ಯಾಸಗಳಿಂದ ನಮ್ಮ ಅರಿವಿಲ್ಲದೆ ದೇಹದಲ್ಲಿ ಕೆಲವು ಹಾನಿಕಾರಕ ಬದಲಾವಣೆಗಳು ಉಂಟಾಗುತ್ತಿವೆ. ಭುಜಗಳು ಮುಂದೆ ಬಾಗುವುದು, ಕುತ್ತಿಗೆ ಗಟ್ಟಿಯಾಗುವುದು, ಬೆರಳುಗಳಲ್ಲಿ ನೋವು, ಕಣ್ಣುಗಳು ದಣಿಯುವುದು, ಕೈಯಲ್ಲಿ ಫೋನ್ ಇಲ್ಲದಿದ್ದರೂ ತಲೆ ಕೆಳಗೆ ಬಾಗಿಯೇ ನೋಡುವ ಅಭ್ಯಾಸ ಬೆಳೆಯುವುದು – ಈ ಎಲ್ಲ ಲಕ್ಷಣಗಳನ್ನು ವೈದ್ಯಕೀಯ ತಜ್ಞರು “ಫೋನ್ ಬಾಡಿ” ಎಂದು ಕರೆಯುತ್ತಿದ್ದಾರೆ.
ಇದು ಅಧಿಕೃತ ವೈದ್ಯಕೀಯ ರೋಗನಿರ್ಣಯವಲ್ಲದಿದ್ದರೂ, ಮೊಬೈಲ್ ಮತ್ತು ಸ್ಕ್ರೀನ್‌ಗಳ ಅತಿಯಾದ ಬಳಕೆಯಿಂದ ದೇಹದಲ್ಲಿ ಉಂಟಾಗುವ ದೈಹಿಕ ಬದಲಾವಣೆಗಳನ್ನು ವಿವರಿಸಲು ಈ ಪದವನ್ನು ಬಳಸಲಾಗುತ್ತಿದೆ.ದೆಹಲಿ ನಗರದ ಸಿಕೆ ಬಿರ್ಲಾ ಆಸ್ಪತ್ರೆಯ ಅಸ್ಥಿ ಚಿಕಿತ್ಸಾ ವಿಭಾಗದ ನಿರ್ದೇಶಕರಾದ ಡಾ. ಅಶ್ವಿನಿ ಮೈಚಂದ್ ಅವರ ಪ್ರಕಾರ, ಸ್ಮಾರ್ಟ್‌ಫೋನ್ ಹಾಗೂ ಸ್ಕ್ರೀನ್‌ಗಳ ಅತಿಯಾದ ಬಳಕೆಯಿಂದ ಸ್ನಾಯು ಹಾಗೂ ಮೂಳೆ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.
ಗಂಟೆಗಟ್ಟಲೆ ತಲೆ ತಗ್ಗಿಸಿಕೊಂಡು ಮೊಬೈಲ್ ನೋಡುವುದು ಅಥವಾ ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ‘ಟೆಕ್ಸ್ಟ್ ನೆಕ್’, ಭುಜಗಳು ಮುಂದೆ ಬಾಗುವುದು, ಮೇಲ್ಭಾಗದ ಬೆನ್ನು ಗಟ್ಟಿಯಾಗುವುದು, ಸೊಂಟ ನೋವು ಹಾಗೂ ಬೆರಳುಗಳಿಗೆ ಗಾಯವಾಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆರಂಭದಲ್ಲೇ ಇವುಗಳನ್ನು ನಿರ್ಲಕ್ಷಿಸಿದರೆ, ಕ್ರಮೇಣ ಸ್ನಾಯುಗಳ ಸಮತೋಲನ ಹಾಳಾಗಿ ಬೆನ್ನುಮೂಳೆಯ ಚಲನೆಯೂ ಕಡಿಮೆಯಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ನಿಮ್ಮ ಕುತ್ತಿಗೆಯ ಮೇಲೆ ಎಷ್ಟು ಭಾರ ಬೀಳುತ್ತದೆ ಗೊತ್ತೇ?
ಸಾಮಾನ್ಯವಾಗಿ ನಮ್ಮ ತಲೆಯ ತೂಕ ಸುಮಾರು 4.5 ರಿಂದ 5.5 ಕೆ.ಜಿ. ಇರುತ್ತದೆ. ಆದರೆ ಮೊಬೈಲ್ ನೋಡಲು ತಲೆಯನ್ನು ಮುಂದೆ ಬಾಗಿದಾಗ, ಕುತ್ತಿಗೆಯ ಮೇಲೆ ಬೀಳುವ ಒತ್ತಡ ಹಲವು ಪಟ್ಟು ಹೆಚ್ಚಾಗುತ್ತದೆ. ದಿನವಿಡೀ ಹೀಗೆ ಅನೇಕ ಬಾರಿ ತಲೆ ಬಾಗುವುದರಿಂದ ಕುತ್ತಿಗೆ ಮತ್ತು ಭುಜಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ.
ಇದರಿಂದ ‘ಟೆಕ್ಸ್ಟ್ ನೆಕ್’ ಸಮಸ್ಯೆ ಉಂಟಾಗಿ ಕುತ್ತಿಗೆ ನೋವು, ತಲೆನೋವು ಹಾಗೂ ಭುಜದ ನೋವಿಗೆ ಕಾರಣವಾಗುತ್ತದೆ. ಆರಂಭದಲ್ಲಿ ಸರಿಯಾದ ವ್ಯಾಯಾಮ ಹಾಗೂ ಭಂಗಿ ಬದಲಾವಣೆಯಿಂದ ಇದು ಕಡಿಮೆಯಾಗಬಹುದು. ಆದರೆ ನಿರ್ಲಕ್ಷಿಸಿದರೆ ದೀರ್ಘಕಾಲದ ನೋವು, ನರಗಳ ಮೇಲೆ ಒತ್ತಡ ಹಾಗೂ ಬೆನ್ನುಮೂಳೆಯ ಸವೆತಕ್ಕೂ ಕಾರಣವಾಗಬಹುದು.
ಮೊಬೈಲ್ ಬಳಸುವಾಗ ಭುಜಗಳು ಮುಂದೆ ಬಾಗಿದ್ದು, ಬೆನ್ನುಮೂಳೆ ಪ್ರಶ್ನಾರ್ಥಕ ಚಿಹ್ನೆ (?)ಯಂತೆ ಕಾಣುತ್ತಿದ್ದರೆ ಅದು ಅಪಾಯದ ಸೂಚನೆ. ದೀರ್ಘಕಾಲ ಹೀಗೆ ಕುಳಿತರೆ ಎದೆ ಸ್ನಾಯುಗಳು ಗಟ್ಟಿಯಾಗುತ್ತವೆ ಮತ್ತು ಬೆನ್ನಿನ ಸ್ನಾಯುಗಳು ದುರ್ಬಲವಾಗುತ್ತವೆ. ಪರಿಣಾಮವಾಗಿ ನೇರವಾಗಿ ನಿಲ್ಲುವುದೂ ಕಷ್ಟವಾಗಬಹುದು.
ಅಷ್ಟೇ ಅಲ್ಲದೆ, ನಿರಂತರ ಸ್ಕ್ರೋಲಿಂಗ್‌ನಿಂದ ಹೆಬ್ಬೆರಳು ಮತ್ತು ಮಣಿಕಟ್ಟಿನಲ್ಲಿ ನೋವು ಕಾಣಿಸಬಹುದು. ಕಣ್ಣು ಮಿಟುಕಿಸುವ ಪ್ರಮಾಣ ಕಡಿಮೆಯಾಗುವುದರಿಂದ ಕಣ್ಣು ಒಣಗುವುದು ಹಾಗೂ ದೃಷ್ಟಿ ಮಸುಕಾಗುವ ಡಿಜಿಟಲ್ ಐ ಸ್ಟ್ರೇನ್ ಸಮಸ್ಯೆಯೂ ಎದುರಾಗಬಹುದು.
ಈ ಸಮಸ್ಯೆ ತಪ್ಪಿಸಿಕೊಳ್ಳಲು ಏನು ಮಾಡಬೇಕು?
ಒಳ್ಳೆಯ ವಿಷಯವೆಂದರೆ, ನಮ್ಮ ದೇಹವು ಮತ್ತೆ ಚೇತರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಮೊಬೈಲ್ ಬಳಸುವುದನ್ನು ಸಂಪೂರ್ಣ ಬಿಡಬೇಕಿಲ್ಲ. ಅದರ ಬಳಕೆಯ ವಿಧಾನವನ್ನು ಬದಲಾಯಿಸಿದರೆ ಸಾಕು.
- ಕಣ್ಣಿನ ಮಟ್ಟದಲ್ಲಿ ಮೊಬೈಲ್ ಹಿಡಿಯಿರಿ: ತಲೆ ಬಾಗುವ ಬದಲು ಫೋನ್ ಅನ್ನು ಕಣ್ಣಿನ ಸಮತಟ್ಟಿನಲ್ಲಿ ಹಿಡಿದು ಬಳಸಿ.
- 30–45 ನಿಮಿಷಗಳ ನಿಯಮ: ಪ್ರತಿ 30–45 ನಿಮಿಷಕ್ಕೊಮ್ಮೆ ಮೊಬೈಲ್‌ನಿಂದ ವಿರಾಮ ತೆಗೆದುಕೊಂಡು ಎದ್ದು ನಿಲ್ಲಿ ಅಥವಾ ಸ್ವಲ್ಪ ನಡೆಯಿರಿ.
- ವ್ಯಾಯಾಮ ಮಾಡಿ: ಕುತ್ತಿಗೆಯನ್ನು ಹಿಂದೆ ಎಳೆಯುವ ಚಿನ್ ಟಕ್ (Chin Tucks), ಭುಜಗಳನ್ನು ಹಿಂದೆ ಚಾಚುವ ಹಾಗೂ ಹೊಟ್ಟೆಯ ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳನ್ನು ಪ್ರತಿದಿನ ಮಾಡಿ.
- 20-20-20 ನಿಯಮ ಪಾಲಿಸಿ: ಪ್ರತಿ 20 ನಿಮಿಷಕ್ಕೊಮ್ಮೆ, 20 ಅಡಿ ದೂರದಲ್ಲಿರುವ ವಸ್ತುವನ್ನು 20 ಸೆಕೆಂಡುಗಳ ಕಾಲ ನೋಡಿ. ಇದರಿಂದ ಕಣ್ಣಿನ ಆಯಾಸ ಕಡಿಮೆಯಾಗುತ್ತದೆ.
- ವಯಸ್ಸಿಗೆ ತಕ್ಕ ಮುನ್ನೆಚ್ಚರಿಕೆ: ಮಕ್ಕಳು ಸ್ಕ್ರೀನ್ ಸಮಯವನ್ನು ಕಡಿಮೆ ಮಾಡಿ ಹೊರಾಂಗಣದಲ್ಲಿ ಆಟವಾಡಬೇಕು. ಉದ್ಯೋಗಿಗಳು ಎರ್ಗೋನಾಮಿಕ್ ಕುರ್ಚಿಗಳನ್ನು ಬಳಸಬೇಕು. ಹಿರಿಯರು ದೇಹದ ನಮ್ಯತೆಯನ್ನು ಹೆಚ್ಚಿಸುವ ವ್ಯಾಯಾಮಗಳನ್ನು ಮಾಡುವುದು ಉತ್ತಮ.
ಸ್ಮಾರ್ಟ್‌ಫೋನ್ ಒಂದು ದಿನದಲ್ಲೇ ನಿಮ್ಮ ದೇಹದ ಆಕಾರವನ್ನು ಬದಲಾಯಿಸುವುದಿಲ್ಲ. ಆದರೆ ಪ್ರತಿದಿನದ ಸಣ್ಣ-ಪುಟ್ಟ ತಪ್ಪು ಅಭ್ಯಾಸಗಳೇ ಕ್ರಮೇಣ ದೇಹದ ಭಂಗಿಯನ್ನು ಹಾಳು ಮಾಡುತ್ತವೆ. ಆದ್ದರಿಂದ ಮುಂದಿನ ಬಾರಿ ಮೊಬೈಲ್ ಕೈಗೆತ್ತಿಕೊಳ್ಳುವಾಗ ನಿಮ್ಮ ಭಂಗಿಯನ್ನು ಒಮ್ಮೆ ಪರಿಶೀಲಿಸಿ. ಭುಜಗಳನ್ನು ಹಿಂದೆ ನೇರವಾಗಿರಿಸಿ, ಮೊಬೈಲ್ ಅನ್ನು ಸ್ವಲ್ಪ ಮೇಲಕ್ಕೆ ಎತ್ತಿ ಬಳಸಿ. ನೋಟಿಫಿಕೇಶನ್‌ಗಳು ಸ್ವಲ್ಪ ತಡವಾದರೂ ಪರವಾಗಿಲ್ಲ, ಆದರೆ ನಿಮ್ಮ ಆರೋಗ್ಯಕ್ಕೆ ತಡವಾಗಬಾರದು.

