ಚಿತ್ರದುರ್ಗ: ರಾಜ್ಯದಲ್ಲಿ ಮಳೆ ಕೊರತೆಯಿಂದ ಬರೆದ ಛಾಯೆ ಆವರಿಸಿದ್ದು, ಈ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಿ ಆದಷ್ಟು ಶೀಘ್ರವೇ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡುವುದಾಗಿ ಉಪಮುಖ್ಯಮಂತ್ರಿ ಹಾಗೂ ಚಿತ್ರದುರ್ಗ ಜಿಲ್ಲಾ ಪ್ರಕೃತಿ ವಿಕೋಪ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಕೃತಿ ವಿಕೋಪ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 125 ವರ್ಷಗಳ ಬಳಿಕ ಸೂಪರ್ ಎಲ್ ನಿನೋ ಪರಿಣಾಮ ಪರಿಸ್ಥಿತಿ ಕಳವಳಕಾರಿಯಾಗಿದ್ದು, ಕುಡಿಯುವ ನೀರಿಗೂ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಕೇಂದ್ರ ತಂಡಗಳು ಬರ ಅಧ್ಯಯನ ನಡೆಸಲಿ ಎಂದು ಹೇಳಿದ್ದಾರೆ.
ಸಂಸದ ಗೋವಿಂದ ಕಾರಜೋಳ, ಜಿಲ್ಲೆಯ ಡಿಸಿಸಿ ಬ್ಯಾಂಕ್ ಗಳಲ್ಲಿ ರೈತರು ಪಡೆದ ಅಲ್ಪಾವಧಿ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು. ಪ್ರಸಕ್ತ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಸುಮಾರು 70,000 ರೈತರಿಗೆ ಸಾಲ ನೀಡುವ ಗುರಿ ಹೊಂದಲಾಗಿತ್ತು. ಆದರೆ, ಇದುವರೆಗೆ ಕೇವಲ 5000 ರೈತರಿಗೆ ಮಾತ್ರ ಸಾಲ ವಿತರಿಸಲಾಗಿದೆ. ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ಹೀಗಾಗಿ ಬೆಳೆ ವಿಮೆಯ ಶೇಕಡ 100ರಷ್ಟು ಪ್ರೀಮಿಯಂ ಕಂತನ್ನು ರಾಜ್ಯ ಸರ್ಕಾರವೇ ಭರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಪರಮೇಶ್ವರ್, ರೈತರ ಸಾಲ ಮನ್ನಾ ಇಡೀ ರಾಜ್ಯಕ್ಕೆ ಅನ್ವಯವಾಗಲಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮಳೆ ಬರುವ ಸಾಧ್ಯತೆ, ಮೋಡಗಳ ಸ್ಥಿತಿಗತಿ ಗಮನಿಸಿ ವಿಜ್ಞಾನಿಗಳ ವರದಿ ಆಧರಿಸಿ ಮೋಡ ಬಿತ್ತನೆ ಮಾಡಬಹುದು. ಹಾವೇರಿಯಲ್ಲಿ ಕೆಲವು ಶಾಸಕರು ಈ ಪ್ರಯತ್ನ ಮಾಡಿದ್ದು, ಅದು ಯಶಸ್ವಿಯದಲ್ಲಿ ರಾಜ್ಯದ್ಯಂತ ಮೋಡ ಬಿತ್ತನೆ ಮಾಡುವ ಚಿಂತನೆ ಇದೆ ಎಂದು ತಿಳಿಸಿದ್ದಾರೆ.

