ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಭೂ ಅಕ್ರಮದ ಪರಭಾರೆ ಬಗೆದಷ್ಟು ಬಯಲಾಗುತ್ತಿದೆ. ನಾಗಮಂಗಲ ಭೂಹಗರಣದ ನಂತರ ಶ್ರೀರಂಗಪಟ್ಟಣದಲ್ಲಿ ಭೂ ಅಕ್ರಮ ಬೆಳಕಿಗೆ ಬಂದಿದೆ.
ಲೋಕಾಯುಕ್ತ ದಾಳಿಯ ವೇಳೆ ಭೂ ಹಗರಣದ ಕರಾಳ ಮುಖ ಬಹಿರಂಗವಾಗಿದ್ದು, 200 ಎಕರೆ ಅಕ್ರಮವಾಗಿ ಭೂಮಿ ಮಂಜೂರು ಪ್ರಕರಣದ ತನಿಖೆ ಕೈಗೊಳ್ಳಲಾಗಿದೆ. ಲೋಕಾಯುಕ್ತ ಪೊಲೀಸರ ತನಿಖೆಯ ವೇಳೆ ಮತ್ತೊಂದು ಅಕ್ರಮ ಬಯಲಾಗಿದೆ,
ಖಾಸಗಿ ವ್ಯಕ್ತಿಯ ಮೂಲಕ ಭೂ ಅಕ್ರಮ ನಡೆಸುತ್ತಿದ್ದ ಕಂದಾಯ ಅಧಿಕಾರಿಗಳು ಸಿಕ್ಕಿ ಬಿದ್ದಿದ್ದಾರೆ, ಅನಧಿಕೃತವಾಗಿ ಡೇಟಾ ಆಪರೇಟರ್ ಕೆಲಸ ಮಾಡುತ್ತಿದ್ದ ನಿತಿನ್ ಪ್ರೇಮಾನಂದ, ಕಂದಾಯ ಇಲಾಖೆಯ 8 ಅಧಿಕಾರಿಗಳನ್ನು ಬಂಧಿಸಲಾಗಿದೆ. ಸರ್ವೆ ಮೇಲ್ವಿಚಾರಕ ಯೋಗರಾಜು, ಭೂಮಾಪಕರಾದ ಜಯಭೋರೇಗೌಡ, ಅರವಿಂದ, ದಯಾನಂದ, ಮಧು, ರಮೇಶ, ಹರೀಶ್, ನಿಶಾ ಬಂಧಿತರು ಎಂದು ಹೇಳಲಾಗಿದೆ.
ಎಡಿಎಲ್ಆರ್ ಮೊಹಮ್ಮದ್ ಹುಸೇನ್ ಅವರ ಮನೆಯಲ್ಲಿದ್ದ ನಿತಿನ್ ಬಂಧಿಸಲಾಗಿದೆ. ಬಂಧನದ ಭೀತಿಯಿಂದ ಎಡಿಎಲ್ಆರ್ ಮೊಹಮ್ಮದ್ ಹುಸೇನ್ ಪರಾರಿಯಾಗಿದ್ದಾರೆ. ಅವರ ಮನೆಯಲ್ಲಿದ್ದ ನಕಲಿ ಸೀಲ್ ಮತ್ತು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಹುಸೇನ್ ಮನೆಯಲ್ಲಿದ್ದ 1.40 ಲಕ್ಷ ರೂಪಾಯಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ, ಅವರ ಮನೆಯಲ್ಲಿ ಅಧಿಕಾರಿಗಳಿಂದ ಶೋಧ ಮುಂದುವರೆದಿದೆ. ಲೋಕಾಯುಕ್ತ ತನಿಕೆಯಲ್ಲಿ ಮತ್ತಷ್ಟು ಭೂ ಅಕ್ರಮ ಬಯಲಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

