HomeAgricultureಬೆಳೆ ನಾಶವಾದ ರೈತರಿಗೆ ವಿಶೇಷ ಪ್ಯಾಕೇಜ್‌ ಘೋಷಣೆಗೆ ಸಿಎಂಗೆ ಮನವಿ: ಸಚಿವ ಕೆ.ಜೆ.ಜಾರ್ಜ್

ಬೆಳೆ ನಾಶವಾದ ರೈತರಿಗೆ ವಿಶೇಷ ಪ್ಯಾಕೇಜ್‌ ಘೋಷಣೆಗೆ ಸಿಎಂಗೆ ಮನವಿ: ಸಚಿವ ಕೆ.ಜೆ.ಜಾರ್ಜ್

ಶಿವಮೊಗ್ಗ: ಪ್ರಸಕ್ತ ಸಾಲಿನ ಏಪ್ರಿಲ್‌ ಮತ್ತು ಮೇ ಮಾಹೆಯಲ್ಲಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ರೈತರು ತೋಟಗಳಲ್ಲಿ ಬೆಳೆದ ಅಡಿಕೆ ಮರಗಳು ನಾಶಗೊಂಡಿದ್ದು, ಈ ಸಂಬಂಧ ಬಾಧಿತ ರೈತರಿಗೆ ವಿಶೇಷ ಪ್ಯಾಕೇಜ್‌ ಘೋಷಿಸುವಂತೆ ಮುಖ್ಯಮಂತ್ರಿಗಳಲ್ಲಿ ಕೋರಿಕೆ ಸಲ್ಲಿಸಲಾಗುವುದು. ಅಂತೆಯೇ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ನಿಯೋಗ ತೆರಳಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವಂತೆ ರಾಜ್ಯ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್‌ ಅವರು ಹೇಳಿದರು.

ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್‌ ನಜೀರ್‌ ಸಾಬ್‌ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಸಂಬಂಧ ಜಿಲ್ಲಾಡಳಿತದ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿರುವುದಾಗಿ ಅವರು ತಿಳಿಸಿದರು.

ಅನಿರೀಕ್ಷಿತ ಮಳೆಯಿಂದಾಗಿ ಜಿಲ್ಲೆಯಲ್ಲಿ 2500 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ತೋಟಗಾರಿಕೆ ಬೆಳೆ ನಾಶವಾಗಿದೆ. ಅಲ್ಲದೇ ಬೆಳೆದು ನಿಂತ ಸುಮಾರು 11ಲಕ್ಷ ಅಡಿಕೆ ಮರಗಳು ಧರೆಗುರುಳಿವೆ. ಇದರಿಂದಾಗಿ ರೈತರ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಸರ್ಕಾರದಿಂದ ವಿಶೇಷ ಪ್ಯಾಕೇಜ್‌ ಘೋಷಿಸಿದಲ್ಲಿ ರೈತರಿಗೆ ಅನುಕೂಲವಾಗಲಿದೆ. ಪ್ರಸ್ತುತ ಎನ್.ಡಿ.ಆರ್.ಎಫ್‌ ನಿಯಮಾನುಸಾರ ಪರಿಹಾರ ಘೋಷಿಸಿದಲ್ಲಿ ನಾಶಗೊಂಡ ತೋಟದ ನಿರ್ವಹಣೆಗೆ ಸಾಕಾಗುವುದಿಲ್ಲ. ಸಂತ್ರಸ್ಥರಿಗೆ ಮಾನವೀಯ ನೆಲೆಯಲ್ಲಿ ಪರಿಹಾರ ದೊರಕಿಸಿ ಕೊಡಿ. ಮಲೆನಾಡಿನಲ್ಲಿ ಸಂಭಾವ್ಯ ಭೂಕುಸಿತ ಉಂಟಾಗುವ ಪ್ರದೇಶಗಳನ್ನು ಗುರುತಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ. ಮಳೆ ಮಾಪನ ಕೇಂದ್ರಗಳ ಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ಅತೀವೃಷ್ಟಿಯಿಂದ ಬೆಳೆಹಾನಿಗೊಳಗಾದ ರೈತರಿಗೆ ಸರಿಯಾದ ಬೆಳೆ ವಿಮಾ ಮೊತ್ತ ದೊರಕದಂತಾಗಿದೆ. ಆದ್ದರಿಂದ ತಕ್ಷಣದ ಕ್ರಮವಾಗಿ ಮಳೆಮಾಪನ ಕೇಂದ್ರಗಳನ್ನು ಸರಿಪಡಿಸಿ, ಹಿಂದಿನ ವರ್ಷದಲ್ಲಿ ಬೆಳೆ ನಾಶಗೊಂಡ ರೈತರಿಗೆ ಪರಿಹಾರಧನ ಕೊಡಿಸಿ ಎಂದು ವಿಧಾನಪರಿಷತ್‌ ಸದಸ್ಯ ಡಾ. ಧನಂಜಯಸರ್ಜಿ ಮನವಿ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏಪ್ರಿಲ್‌ ಮಾಹೆಯಲ್ಲಿ ಬಿದ್ದ ಮಳೆಯಿಂದಾಗಿ ಹಾನಿಗೊಳಗಾದ ಒಟ್ಟು 592 ಮನೆಗಳ ಪೈಕಿ 66 ಮನೆಗಳು ಸಂಪೂರ್ಣ ನಾಶಗೊಂಡಿವೆ. 526 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಮೇ ಮಾಹೆಯಲ್ಲಿ 220 ಮನೆಗಳು ಹಾನಿಗೊಳಗಾಗಿದ್ದು, 1 ಮನೆ ಪೂರ್ಣ ಪ್ರಮಾಣದಲ್ಲಿ ಹಾಗೂ 219 ಮನೆಗಳು ಭಾಗಶಃ ಹಾನಿಗೊಳಗಾಗಿದೆ. ಮನೆ ಸಂತ್ರಸ್ಥರ ನೆರವಿಗೆ ಈವರೆಗೆ ಯಾರೊಬ್ಬರೂ ಧಾವಿಸದಿರುವುದು ಬೇಸರದ ಸಂಗತಿಯಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಕೆ.ಜೆ.ಜಾರ್ಜ್‌ ಅವರು ಮಾತನಾಡಿ, ಸಂತ್ರಸ್ಥ ಕುಟುಂಬದವರಿಗೆ ತಕ್ಷಣದ ಪರಿಹಾರ ಕ್ರಮವನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ದೊರಕಿಸಿಕೊಡಬೇಕು. ಅಲ್ಲದೆ ಭಾಗಶಃ ಅಥವಾ ಪೂರ್ಣ ಪ್ರಮಾಣದ ಮನೆ ನಾಶಗೊಂಡವರ ಮಾಹಿತಿ ಪಡೆದು, ಅವರಿಗೆ ಸಕಾಲದಲ್ಲಿ ಸೌಲಭ್ಯ ಒದಗಿಸಿಕೊಡುವಂತೆ ಸೂಚಿಸಿದರು.

ದೇವಕಾತಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಘಟಕಗಳಿಗೆ ಅಗತ್ಯವಿರುವ ವಿದ್ಯುತ್‌ ಸರಬರಾಜು ಮಾಡುವಲ್ಲಿ ತೀವ್ರ ತರಹದ ವ್ಯತ್ಯಯವಾಗುತ್ತಿದೆ. ಅದಕ್ಕಾಗಿ ಶಾಶ್ವತ ಪರಿಹಾರ ನೀಡಬೇಕು. ಕೈಗಾರಿಕಾ ಘಟಕಗಳಿಗೆ ನಿರಂತರ ವಿದ್ಯುತ್‌ ಸರಬರಾಜು ಮಾಡಲು ಅಗತ್ಯವಾಗಿರುವ ಪವರ್‌ ಸ್ಟೇಷನ್‌ ನಿರ್ಮಿಸಲು 2 ಎಕರೆ ಪ್ರದೇಶವನ್ನು ಕಾಯ್ದಿರಿಸಲಾಗಿದೆ ಎಂದು ಶಾಸಕ ಚನ್ನಬಸಪ್ಪ ಅವರು ಸಚಿವರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ಸದರಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು. ನಗರದ ಹೊರವಲಯದ ಗೋವಿಂದಾಪುರದಲ್ಲಿ ನಿರ್ಮಾಣಗೊಂಡಿರುವ ವಸತಿ ಸಮುಚ್ಚಯದಲ್ಲಿನ ನಿವಾಸಿಗಳ ಅನುಕೂಲಕ್ಕಾಗಿ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿನ ವಿದ್ಯುತ್‌ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.

 ಜಿಲ್ಲೆಯಲ್ಲಿರುವ 280 ಮಳೆಮಾಪನ ಕೇಂದ್ರಗಳು ಇದ್ದು, ಅವುಗಳ ಪೈಕಿ ಹಾಳಾಗಿದ್ದ 200ಕ್ಕೂ ಹೆಚ್ಚಿನ ಮಳೆಮಾಪನ ಕೇಂದ್ರಗಳನ್ನು ದುರಸ್ತಿ ಮಾಡಲಾಗಿದೆ. ಕಳೆದ ಸಾಲಿನ ಬೆಳೆ ಸಮೀಕ್ಷೆಯಿಂದ ಸಂತ್ರಸ್ಥ ರೈತರಿಗೆ ಬೆಳೆವಿಮಾ ಪರಿಹಾರ ಮೊತ್ತ ಕೊಡುವಲ್ಲಿ ಆಗಿರುವ ನ್ಯೂನತೆಯನ್ನು ಸರಿಪಡಿಸುವಲ್ಲಿ ವಿಮಾ ಕಂಪನಿಗಳ ಮುಖ್ಯಸ್ಥರಿಗೆ ಹಾಗೂ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.

ಪ್ರಸಕ್ತ ಸಾಲಿನ ಮಳೆ ಕೊರತೆಯಿಂದಾಗಿ ಕೆರೆಕಟ್ಟೆ ಕಾಲುವೆಗಳನ್ನು ತುಂಬಿಸಿಕೊಳ್ಳುವುದು, ಏತನೀರಾವರಿ ಸೌಲಭ್ಯ ಬಳಸಿಕೊಳ್ಳುವುದು ಅನಿವಾರ್ಯವಾಗಲಿದೆ. ಅದಕ್ಕಾಗಿ ಸಣ್ಣ ಮತ್ತು ಭಾರೀ ನೀರಾವರಿ ಇಲಾಖೆ ಸನ್ನದ್ಧವಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಭಾರೀ ನೀರಾವರಿ ಇಲಾಖೆಯ ವ್ಯಾಪ್ತಿಗೊಳಪಡುವ ಏತ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಮೆಸ್ಕಾಂಗೆ ಕೋಟ್ಯಾಂತರ ರೂಪಾಯಿಗಳ ವಿದ್ಯುತ್‌ ಶುಲ್ಕ ಪಾವತಿಸುವುದು ಬಾಕಿ ಇದೆ. ರಾಜ್ಯದಲ್ಲಿಯೂ ನೆರೆಯ ರಾಜ್ಯಗಳಿಂದ ವಿದ್ಯುತ್‌ ಖರೀದಿಸಿ ವಿತರಿಸಲಾಗುತ್ತಿದೆ. ವಿದ್ಯುತ್‌ ಸರಬರಾಜು ಮಾಡಿದವರಿಗೂ ಹಣ ಪಾವತಿ ಮಾಡಬೇಕಾಗಿರುವುದರಿಂದ ಏತ ನೀರಾವರಿ ಸೌಲಭ್ಯಕ್ಕಾಗಿ ವಿದ್ಯುತ್‌ ಬಳಸಿಕೊಳ್ಳುವ ಪೂರ್ವದಲ್ಲಿ ಮುಂಗಡ ಹಣ ಪಾವತಿಸುವಂತೆ ಸೂಚಿಸಲಾಗುವುದು ಎಂದ ಅವರು, ಮುಂದಿನ ದಿನಗಳಲ್ಲಿ ಸೋಲಾರ್‌ನಿಂದ ಏತ ನೀರಾವರಿ ಯೋಜನೆಯನ್ನು ಬಳಸಿಕೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್‌ ಬಾನು, ಅಪರ ಜಿಲ್ಲಾಧಿಕಾರಿ ಅಭಿಷೇಕ್‌ ವಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌, ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular