HomeLive NewsBIG NEWS: ಬೆಂಗಳೂರಿನಲ್ಲಿ ನಾಳೆಯಿಂದ ಆರಂಭವಾಗಲಿದೆ ಫುಟ್​ಪಾತ್ ತೆರವು ಕಾರ್ಯಾಚರಣೆ: ಪರ್ಯಾಯ ವ್ಯವಸ್ಥೆಗಾಗಿ ಬೀದಿಬದಿ ವ್ಯಾಪಾರಿಗಳ...

BIG NEWS: ಬೆಂಗಳೂರಿನಲ್ಲಿ ನಾಳೆಯಿಂದ ಆರಂಭವಾಗಲಿದೆ ಫುಟ್​ಪಾತ್ ತೆರವು ಕಾರ್ಯಾಚರಣೆ: ಪರ್ಯಾಯ ವ್ಯವಸ್ಥೆಗಾಗಿ ಬೀದಿಬದಿ ವ್ಯಾಪಾರಿಗಳ ಒತ್ತಾಯ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸಲು ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಮುಂದಾಗಿದೆ. ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರ ಸೂಚನೆ ಮೇರೆಗೆ ಜುಲೈ 1 ನಾಳೆಯಿಂದ ಜಿಬಿಎ ಮತ್ತು ಐದು ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಬೃಹತ್ ತೆರವು ಕಾರ್ಯಾಚರಣೆ ಆರಂಭವಾಗಲಿದೆ.

ಸಚಿವ ಕೃಷ್ಣ ಭೈರೇಗೌಡರು ಈಗಾಗಲೇ ಎರಡು ಸುತ್ತಿನ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಕಾರ್ಯಾಚರಣೆಯನ್ನು ನಿಲ್ಲಿಸಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಲೈಸೆನ್ಸ್ ಹೊಂದಿರುವ ವ್ಯಾಪಾರಿಗಳನ್ನು ಹೊರತುಪಡಿಸಿ, ಉಳಿದ ಅತಿಕ್ರಮಣಗಳನ್ನು ತೆರವುಗೊಳಿಸಲಾಗುತ್ತದೆ. ಫುಟ್‌ಪಾತ್‌ಗಳು ಜನಸಾಮಾನ್ಯರ ಹಕ್ಕು ಮತ್ತು ಪಾದಚಾರಿಗಳ ಓಡಾಟಕ್ಕೆ ಮಾತ್ರ ಮೀಸಲಾಗಿವೆ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಪಾರ್ಕಿಂಗ್, ಬೀದಿಬದಿ ವ್ಯಾಪಾರ, ಕಟ್ಟಡ ಸಾಮಗ್ರಿಗಳ ಸಂಗ್ರಹ ಮತ್ತು ಬಿಡಾಡಿ ವಾಹನ ನಿಲುಗಡೆಯಂತಹ ಹಲವು ವಿಧದ ಅತಿಕ್ರಮಣಗಳನ್ನು ತೆರವುಗೊಳಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ನಾಳೆಯಿಂದ ಫುಟ್ ಪಾತ್ ತೆರವು ಕಾರ್ಯಾಚರಣೆ ಆರಂಭವಾಗಲಿದ್ದು, ಈಗಾಗಲೇ ಇದಕ್ಕೆ ತಯಾರಿಗಳನ್ನು ಪಾಲಿಕೆ ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಅಲ್ಲದೆ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಳಿಸಲು ಪಾಲಿಕೆ ಅಧಿಕಾರಿಗಳು ಸಿದ್ದಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾದಾಚಾರಿ ಮಾರ್ಗಗಳ ಒತ್ತುವರಿಯಿಂದಾಗಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಕೆಲವೊಂದು ಖಡಕ್ ಸೂಚನೆಗಳನ್ನು ಸಚಿವ ಕೃಷ್ಣಬೈರೇಗೌಡ ನೀಡಿದ್ದಾರೆ. ನಗರದ ಹಲವು ರಸ್ತೆಗಳಲ್ಲಿ ಫುಟ್ ಪಾತ್ ಗಳ ಮೇಲೆ ವ್ಯಾಪಾರ- ವಹಿವಾಟು ನಡೆಸಲಾಗುತ್ತಿದೆ. ಬೀದಿ ಬದಿ ವ್ಯಾಪಾರಸ್ಥರು ಇಲ್ಲಿ ಸಣ್ಣ ಪುಟ್ಟ ಅಂಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಫುಟ್ ಪಾತ್ ಗಳ ಒತ್ತುವರಿಯಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ನಡೆದುಕೊಂಡು ಹೋಗಲು ಪಾದಾಚಾರಿ ಮಾರ್ಗಗಳೇ ಇಲ್ಲದಂತಾಗಿದೆ. ಹೀಗಾಗಿ ಪ್ರಮುಖ ರಸ್ತೆಗಳಲ್ಲೇ ಜನರು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಇದೆ. ಇನ್ನು ಕೆಲವು ರಸ್ತೆಗಳಲ್ಲಿ ಫುಡ್ ಸ್ಟ್ರೀಟ್‌ಗಳೇ ಸೃಷ್ಟಿಯಾಗಿದ್ದು, ಇದರಿಂದ ವಾಹನ ಓಡಾಟಗಳಿಗೂ ಅಡ್ಡಿ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಒತ್ತುವರಿ ತೆರವು ಕಾರ್ಯಕ್ಕೆ ಚಾಲನೆ ನೀಡಲು ಪಾಲಿಕೆ ಸಜ್ಜಾಗಿದೆ.

ಜುಲೈ 1 ರಿಂದ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ವಿಭಾಗವಾರು 15 ಕಿ.ಮೀ ಸೇರಿದಂತೆ ಒಟ್ಟು 100 ಕಿ.ಮೀ ಪಾದಚಾರಿ ಮಾರ್ಗವನ್ನು ಅಭಿವೃದ್ದಿ ಪಡಿಸಲು ಇಲಾಖೆ ಮುಂದಾಗಿದೆ.

2026-27 ನೇ ಸಾಲಿನ ಬಜೆಟ್ ನಲ್ಲಿ ಬೆಂಗಳೂರು ನಗರದ 1000 ಕಿ.ಮೀ ಪಾದಚಾರಿ ಮಾರ್ಗದ ನಿರ್ವಹಣೆಗೆ ವಿಶೇಷ ಅನುದಾನವನ್ನು ಕಾಯ್ದಿರಿಸಲಾಗಿದೆ. ಅಲ್ಲದೆ, ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ಕೂಡಾ ಪೂರ್ಣಗೊಂಡಿದೆ.

ಒತ್ತುವರಿ ತೆರವುಗೊಳಿಸುವುದು ಮಾತ್ರವಲ್ಲ, ಕಾರ್ಯಾಚರಣೆಯ ಬಳಿಕ ಮತ್ತೆ ಪಾದಚಾರಿ ಮಾರ್ಗಗಳು ಒತ್ತುವರಿ ಆಗದಂತೆ ಬಿಗಿ ಕ್ರಮಗಳನ್ನು ಜಿಬಿಎ ಕೈಗೊಂಡಿದೆ. ಹೀಗಾಗಿ ಪಾಲಿಕೆ ಮಾರ್ಷಲ್ ಹಗಲು ರಾತ್ರಿ ಗಸ್ತು ಕೈಗೊಳ್ಳಲಿದ್ದಾರೆ. ಈ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಮತ್ತೊಂದೆಡೆ, ಬೀದಿಬದಿ ವ್ಯಾಪಾರಿಗಳು ಸರ್ಕಾರದಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಕೇಳುತ್ತಿದ್ದಾರೆ. ಆದರೆ, ಜಿಬಿಎ ಯಾವುದೇ ರಾಜಿ ಮಾಡಿಕೊಳ್ಳದೆ, 2,000 ಕಿಲೋಮೀಟರ್ ಪ್ರಮುಖ ರಸ್ತೆಗಳಲ್ಲಿನ ಫುಟ್‌ಪಾತ್‌ಗಳನ್ನು ಮುಕ್ತಗೊಳಿಸಲು ನಿರ್ಧರಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular