ಬೆಂಗಳೂರು: ನಗರದಲ್ಲಿ ನಿರ್ಲಕ್ಷ್ಯದಿಂದ ಸಂಭವಿಸಬಹುದಾದ ಅಪಾಯವನ್ನು ತೋರಿಸುವ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಕೆ.ಆರ್.ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಗಾಯತ್ರಿ ಲೇಔಟ್ನಲ್ಲಿ ಚಲಿಸುತ್ತಿದ್ದ ಓಮಿನಿ ವ್ಯಾನ್ನಿಂದ ಐವರು ಮಕ್ಕಳು ರಸ್ತೆಗೆ ಬಿದ್ದಿದ್ದು, ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಹಿತಿಯ ಪ್ರಕಾರ, ಓಮಿನಿ ವ್ಯಾನ್ ರಸ್ತೆ ಗುಂಡಿಗೆ ಇಳಿದಾಗ ಹಿಂಬದಿಯ ಡೋರ್ ಏಕಾಏಕಿ ತೆರೆದಿದೆ. ಇದರಿಂದ ವಾಹನದೊಳಗಿದ್ದ ಐವರು ಮಕ್ಕಳು ರಸ್ತೆಗೆ ಉರುಳಿ ಬಿದ್ದಿದ್ದಾರೆ. ಘಟನೆ ಕಂಡ ಸ್ಥಳೀಯರು ಹಾಗೂ ಇತರೆ ವಾಹನ ಸವಾರರು ತಕ್ಷಣ ಮಕ್ಕಳ ನೆರವಿಗೆ ಧಾವಿಸಿದ್ದಾರೆ.
ಅದೃಷ್ಟವಶಾತ್, ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣ ಚಿಕಿತ್ಸೆ ನೀಡಲಾಗಿದೆ. ದೊಡ್ಡ ಅನಾಹುತ ತಪ್ಪಿರುವುದು ಎಲ್ಲರಿಗೂ ನೆಮ್ಮದಿ ತಂದಿದೆ.
ಈ ಘಟನೆ ವಾಹನಗಳ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಶೇಷವಾಗಿ ಮಕ್ಕಳನ್ನು ಕರೆದುಕೊಂಡು ಹೋಗುವಾಗ ವಾಹನದ ಎಲ್ಲಾ ಬಾಗಿಲುಗಳು ಸರಿಯಾಗಿ ಲಾಕ್ ಆಗಿರುವುದನ್ನು ಚಾಲಕರು ಖಚಿತಪಡಿಸಿಕೊಳ್ಳಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಾಹನ ಚಾಲಕರ ನಿರ್ಲಕ್ಷ್ಯದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

