ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲನಭಿಸಿದ್ದು, ಜೆಡಿಎಸ್ ಶಾಸಕರು ಅಡ್ಡ ಮತದಾನ ಮಾಡಿದ್ದೇ ಸೋಲಿಗೆ ಕಾರಣ ಎನ್ನಲಾಗಿದೆ. ಜೆಡಿಎಸ್ ಸೋಲಿನ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ, ಚುನಾವಣೆಯ ಫಲಿತಾಂಶ ನನಗೊಂದು ಹೊಸ ಅನುಭವ ನೀಡಿದ್ದು, ಸ್ವಂತ ಪಕ್ಷದವರೇ ನನಗೆ ದೊಡ್ಡ ಸಂದೇಶ ಕೊಟ್ಟಿದ್ದಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಅತಿಯಾದ ನಂಬಿಕೆಯೇ ಆಘಾತ ತಂದಿದೆ ಎಂದು ಹೇಳುವ ಮೂಲಕ ಜೆಡಿಎಸ್ ಶಾಸಕರು ಅಡ್ಡಮತದಾನ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜೆಡಿಎಸ್ ಹಿರಿಯ ನಾಯಕ ಜಿ.ಟಿ. ದೇವೇಗೌಡ ಅವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಅಡ್ಡ ಮತದಾನ ನಡೆಯುತ್ತದೆ ಎಂಬುದು ನಮಗೆ ಮೊದಲೇ ತಿಳಿದಿತ್ತು. ಆದರೆ ಅತಿಯಾದ ನಂಬಿಕೆ ಆಘಾತವನ್ನು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದೆ ಪಕ್ಷದಲ್ಲಿ ಯುವಕರು ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ನಿರ್ಧಾರ ಮಾಡುತ್ತೇನೆ. ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸಲ್ಲ. ಆದರೆ ಪಕ್ಷದ ವಿಚಾರದಲ್ಲಿ ಬದಲಾವಣೆಗಳನ್ನು ತರಬೇಕಾದ ಅಗತ್ಯವಿದೆ ಎಂದರು.
ಹಿರಿಯ ಶಾಸಕ ಜಿ.ಟಿ.ದೇವೇಗೌಡರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗರಂ ಆದ ಕುಮಾರಸ್ವಾಮಿ, ‘ಅವರ ಹೆಸರು ಎತ್ತಬೇಡಿ’ ಎಂದು ಗದರಿದರು. ಕಳೆದ ಒಂದೂವರೆ ವರ್ಷದಿಂದಲೂ ಅವರ ಬಗ್ಗೆ ಮಾತನಾಡಿಲ್ಲ, ಇತ್ತೀಚೆಗೆ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಸಭೆಯಲ್ಲೂ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿ.ಟಿ.ದೇವೇಗೌಡರು ಒಂದು ಕಾಲಲ್ಲ, ಎರಡೂ ಕಾಲುಗಳನ್ನು ಹೊರಗಿಟ್ಟಿದ್ದಾರೆ. ಈ ಬಗ್ಗೆ ನಮಗೆ ಗೊತ್ತಿದೆ. ಅವರ ಬಗ್ಗೆ ನಾನು ಈ ಹಿಂದೆ ಏನು ಹೇಳಿದ್ದೇನೋ ಅದೇ ಅಂತಿಮ. ಜಿ.ಟಿ,ದೇವೇಗೌಡರ ವಿಚಾರದಲ್ಲಿ ನನ್ನ ಸ್ಟ್ಯಾಂಡ್ ಬದಲಾಗಲ್ಲ. ಹೆಚ್.ಡಿ,ದೇವೇಗೌಡರು ಹೇಳಿದರೂ ನನ್ನ ಸ್ಟ್ಯಾಂಡ್ ದಲಾಯಿಸಿಕೊಳ್ಳಲ್ಲ. ಪಕ್ಷದ ಹಿತದೃಷ್ಟಿಯಿಂದ ನನ್ನ ಸ್ಟ್ಯಾಂಡ್ ಬದಲಾಯಿಸಿಕೊಳ್ಳುವುದಿಲ್ಲ ಎಂದರು.
ಈ ಬಾರಿ ಟಿಕೆಟ್ ಅಂತಿಮ ತೀರ್ಮಾನ್ ಅಮಾಡುವುದು ನಾನೇ. ಇದರ ಬಗ್ಗೆ ಯಾವ ಗೊಂದಲವೂ ಬೇಡ ಎಂದು ಹೇಳುವ ಮೂಲಕ ಜಿ.ಟಿ.ದೇವೇಗೌಡರಿಗೆ ಪರೀಕ್ಷ ಟಾಂಗ್ ನೀಡಿದ್ದಾರೆ. ಯಾವಾಗ ಯಾವ್ಯಾವ ರೀತಿಯ ಆಟ ಕಟ್ಟಿದ್ದಾರೆ ಎಂಬುದು ನಮಗೆ ಗೊತ್ತಿದೆ. ಜಿ.ಟಿ.ದೇವೇಗೌಡರ ಎಲ್ಲಾ ಪೂರ್ವಾಪರ ನನಗೆ ಗೊತ್ತಿದೆ. ಈ ಬಾರಿ ಕಠಿಣ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.

