HomeRecipiesಬಾಯಿ ಚಪ್ಪರಿಸುವಂತಹ ರುಚಿಕರ ಬೇಸನ್ ಕಚೋರಿ: ಸುಲಭವಾಗಿ ತಯಾರಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್

ಬಾಯಿ ಚಪ್ಪರಿಸುವಂತಹ ರುಚಿಕರ ಬೇಸನ್ ಕಚೋರಿ: ಸುಲಭವಾಗಿ ತಯಾರಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್

ಸಂಜೆ ಚಹಾದ ಜೊತೆಗೆ ಏನಾದರೂ ಗರಿಗರಿಯಾದ ಮತ್ತು ಮಸಾಲೆಯುಕ್ತ ತಿಂಡಿ ತಿನ್ನಬೇಕು ಎನಿಸಿದರೆ ಕಚೋರಿ ಅತ್ಯುತ್ತಮ ಆಯ್ಕೆಯಾಗಿದೆ. ಸಾಮಾನ್ಯವಾಗಿ ಆಲೂಗಡ್ಡೆ ಅಥವಾ ಬೇಳೆ ಕಚೋರಿಯನ್ನು ನೀವೆಲ್ಲರೂ ಸವಿದಿರುತ್ತೀರಿ. ಆದರೆ ಕಡಲೆ ಹಿಟ್ಟು ಮತ್ತು ಉಪ್ಪಿನಕಾಯಿ ಮಸಾಲೆಯನ್ನು ಬಳಸಿ ತಯಾರಿಸುವ ಬೇಸನ್ ಕಚೋರಿ ತಿಂದರೆ ಅದರ ರುಚಿಯೇ ಬೇರೆ. ಇದನ್ನು ಆಲೂಗಡ್ಡೆ ಪಲ್ಯ ಅಥವಾ ಚಟ್ನಿ ಜೊತೆಗೆ ಸವಿಯಲು ಅದ್ಭುತವಾಗಿರುತ್ತದೆ. ಈ ವಿಶೇಷ ಕಚೋರಿಯನ್ನು ಮನೆಯಲ್ಲೇ ಸುಲಭವಾಗಿ ಹೇಗೆ ಮಾಡಬಹುದು ಎಂಬುದನ್ನು ಇಲ್ಲಿ ತಿಳಿಯೋಣ.

ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು ಎರಡು ಕಪ್, ಕಡಲೆ ಹಿಟ್ಟು ಒಂದು ಕಪ್, ಜೀರಿಗೆ ಅರ್ಧ ಚಮಚ, ಸೋಂಪು ಅರ್ಧ ಚಮಚ, ಅರಿಶಿನ ಪುಡಿ ಚಿಟಿಕೆ, ಅಚ್ಚಖಾರದ ಪುಡಿ ಕಾಲು ಚಮಚ, ಕೊತ್ತಂಬರಿ ಪುಡಿ ಒಂದು ಚಮಚ, ಉಪ್ಪಿನಕಾಯಿ ಮಸಾಲೆ ಒಂದು ಚಮಚ, ಇಂಗು ಚಿಟಿಕೆ, ಓಮಕಾಳು ಮತ್ತು ಕರಿಜೀರಿಗೆ ಸ್ವಲ್ಪ, ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ, ತುಪ್ಪ ಒಂದು ಚಮಚ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಓಮಕಾಳು, ಕರಿಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಚಮಚ ತುಪ್ಪವನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ ಮೃದುವಾದ ಹಿಟ್ಟನ್ನು ತಯಾರಿಸಿ ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗ ಕಚೋರಿಯ ಒಳಗಿನ ಹೂರಣ ಸಿದ್ಧಪಡಿಸಲು ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ. ಎಣ್ಣೆ ಕಾದ ನಂತರ ಇಂಗು, ಜೀರಿಗೆ ಮತ್ತು ಸೋಂಪು ಹಾಕಿ ಸಿಡಿಸಿ. ಬಳಿಕ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಸೇರಿಸಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.

ಇದಾದ ನಂತರ ಬಾಣಲೆಗೆ ಒಂದು ಕಪ್ ಕಡಲೆ ಹಿಟ್ಟನ್ನು ಹಾಕಿ ಎರಡು ನಿಮಿಷಗಳ ಕಾಲ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ನಂತರ ಅಚ್ಚಖಾರದ ಪುಡಿ, ಕೊತ್ತಂಬರಿ ಪುಡಿ ಮತ್ತು ಉಪ್ಪಿನಕಾಯಿ ಮಸಾಲೆಯನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕೈಯಾಡಿಸಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಒಲೆಯನ್ನು ಆಫ್ ಮಾಡಿ. ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ.

ಬಳಿಕ ಕರಿಯಲು ಬೇಕಾದ ಎಣ್ಣೆಯನ್ನು ಒಲೆಯ ಮೇಲಿಟ್ಟು ಕಾಯಿಸಿ. ನಾವು ಮೊದಲೇ ಸಿದ್ಧಪಡಿಸಿಟ್ಟುಕೊಂಡ ಮೈದಾ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ಸ್ವಲ್ಪ ಲಟ್ಟಿಸಿಕೊಳ್ಳಿ. ಇದರ ಮಧ್ಯದಲ್ಲಿ ಕಡಲೆ ಹಿಟ್ಟಿನ ಮಸಾಲೆಯ ಹೂರಣವನ್ನು ಇಟ್ಟು, ಎಲ್ಲ ಕಡೆಯಿಂದಲೂ ಉಂಡೆಯನ್ನು ಮುಚ್ಚಿ. ನಂತರ ಇದನ್ನು ಪುರಿಯ ಆಕಾರದಲ್ಲಿ ಹದವಾಗಿ ಲಟ್ಟಿಸಿಕೊಳ್ಳಿ.

ಎಣ್ಣೆ ಚೆನ್ನಾಗಿ ಕಾದ ನಂತರ ಉರಿಯನ್ನು ಮಧ್ಯಮ ಮಟ್ಟಕ್ಕೆ ಇಟ್ಟುಕೊಳ್ಳಿ. ಲಟ್ಟಿಸಿದ ಕಚೋರಿಗಳನ್ನು ಎಣ್ಣೆಯಲ್ಲಿ ಹಾಕಿ, ಅವು ಎರಡೂ ಬದಿಯಲ್ಲಿ ಹೊಂಬಣ್ಣಕ್ಕೆ ಬಂದು ಗರಿಗರಿಯಾಗುವವರೆಗೆ ಸರಿಯಾಗಿ ಕರಿಯಿರಿ. ಈಗ ಬಿಸಿಬಿಸಿಯಾದ ಮಸಾಲಾ ಬೇಸನ್ ಕಚೋರಿ ಸವಿಯಲು ಸಿದ್ಧ. ಇದನ್ನು ಆಲೂಗಡ್ಡೆ ಸಾರು ಅಥವಾ ಪುದೀನಾ ಚಟ್ನಿ ಜೊತೆ ಬಡಿಸಿದರೆ ತಿನ್ನಲು ಅತ್ಯಂತ ರುಚಿಕರವಾಗಿರುತ್ತದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular