ಮೈಸೂರು: ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಒಂದೇ ದಿನ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈದ್ಯರ ಕೊರತೆಯಿಂದ 11 ಜನರ ಸಾವು ಸಂಭವಿಸಿದೆ ಎಂದು ಮೃತರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿವಿ ಪುರಂ ಪೋಲೀಸರು ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮತ್ತು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ದಿನೇಶ್ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ದಿನೇಶ್ ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ ಸಾವಿಗೆ ತೀವ್ರ ಹೃದಯಾಘಾತವೇ ಕಾರಣ ಎಂದು ಹೇಳಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಶೇಕಡ 20ರಷ್ಟು ಜನ ತೀವ್ರ ಹೃದಯಘಾತವಾಗಿ ಬರುತ್ತಾರೆ. ಅವರು ಬದುಕುವ ಸಾಧ್ಯತೆ ಕಡಿಮೆ ಇರುತ್ತದೆ. ಆದರೂ ನಾವು ಹಣಕಾಸಿನ ಬಗ್ಗೆ ನೋಡದೆ ಮೊದಲು ಅಂಥವರಿಗೆ ಚಿಕಿತ್ಸೆ ನೀಡುತ್ತೇವೆ. ಮೃತಪಟ್ಟ 11 ಜನ ಕೂಡ ತೀವ್ರ ತರದ ಹೃದಯಾಘಾತಕ್ಕೆ ಒಳಗಾಗಿದ್ದವರ ಗೋಲ್ಡನ್ ಹವರ್ ಕಳೆದ ನಂತರ ಅವರು ಆಸ್ಪತ್ರೆಗೆ ಬಂದಿದ್ದಾರೆ. ಅವರನ್ನು ವೈದ್ಯರು ಐಸಿಯುನಲ್ಲಿ ಇಟ್ಟು ಎಲ್ಲಾ ರೀತಿಯ ಚಿಕಿತ್ಸೆ ನೀಡಿದ್ದಾರೆ. ನಿತ್ಯ ಸಾಯುವವರ ಸಂಖ್ಯೆ ಶೇಕಡ 5 ರಿಂದ 7 ರಷ್ಟು ಇದೆ. ರಾಷ್ಟ್ರೀಯ ಮಟ್ಟದಲ್ಲಿ ಈ ಸಂಖ್ಯೆ ಶೇಕಡ 12ರಷ್ಟು ಇದೆ ಎಂದು ಹೇಳಿದ್ದಾರೆ.
ಮೃತಪಟ್ಟ 11 ಜನರಲ್ಲಿ ಒಬ್ಬರು ಮಾತ್ರ 45 ವರ್ಷದವರಾಗಿದ್ದು, ಉಳಿದವರೆಲ್ಲರೂ ಹಿರಿಯ ನಾಗರೀಕರಾಗಿದ್ದಾರೆ. ಅವರಿಗೆ ಬಿಪಿ ಸೇರಿದಂತೆ ಹಲವು ಸಮಸ್ಯೆಗಳಿವೆ. ಹೀಗಾಗಿ ಚಿಕಿತ್ಸೆ ನೀಡಿದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ವೈದ್ಯರ ಕೊರತೆಯಿಂದ ಈ ರೀತಿಯಾಗಿಲ್ಲ. ರಾತ್ರಿ ಪಾಳಿಯಲ್ಲಿ ನಾಲ್ವರು ವೈದ್ಯರು ಇರುತ್ತಾರೆ ಎಂದು ಅವರು ಹೇಳಿದ್ದಾರೆ.

