ಪ್ರಸಿದ್ಧ ಇ-ಕಾಮರ್ಸ್ ಸಂಸ್ಥೆ ಅಮೇಜಾನ್ ಇಂಡಿಯಾ ತನ್ನ ‘Amazon Now’ ಸೇವೆಯ ಪ್ರಚಾರಕ್ಕಾಗಿ ಬಿಡುಗಡೆ ಮಾಡಿದ ಹೊಸ ಜಾಹೀರಾತು ವಿವಾದದ ಕೇಂದ್ರಬಿಂದುವಾಗಿದೆ.
ಭಾರತದ ಹೆಮ್ಮೆಯ ಪ್ರಾಚೀನ ಗಣಿತಜ್ಞ ಆರ್ಯಭಟ ಅವರನ್ನು ಈ ಜಾಹೀರಾತಿನಲ್ಲಿ ಚಿತ್ರಿಸಿದ ರೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.ಜಾಹೀರಾತಿನಲ್ಲಿ ಆರ್ಯಭಟರು ಆಧುನಿಕ ಕಾಲಕ್ಕೆ ಬಂದಂತೆ ತೋರಿಸಲಾಗಿದ್ದು, ಅಮೆಜಾನ್ ತನ್ನ ‘ಶೂನ್ಯ ಡೆಲಿವರಿ ಶುಲ್ಕ’ ಮತ್ತು ‘ಶೂನ್ಯ ಹ್ಯಾಂಡ್ಲಿಂಗ್ ಶುಲ್ಕ’ದಂತಹ ಆಫರ್‌ಗಳನ್ನು ಪ್ರಚಾರ ಮಾಡಲು, ಅವರು ಜಗತ್ತಿಗೆ ಪರಿಚಯಿಸಿದ ‘ಶೂನ್ಯ’ (Zero) ಪರಿಕಲ್ಪನೆಯನ್ನು ಬಳಸಿಕೊಂಡಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಆರ್ಯಭಟರನ್ನು ಡೆಲಿವರಿ ಬಾಯ್‌ನಂತೆ ಚಿತ್ರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಕೇವಲ ವಾಣಿಜ್ಯ ಉದ್ದೇಶಕ್ಕಾಗಿ ಭಾರತದ ವೈಜ್ಞಾನಿಕ ಪರಂಪರೆ ಮತ್ತು ವಿಶ್ವಕ್ಕೆ ‘ಶೂನ್ಯ’ದ ಮಹತ್ವವನ್ನು ಪರಿಚಯಿಸಿದ ಮಹಾನ್ ಗಣಿತಜ್ಞರನ್ನು ಹಾಸ್ಯದ ಹೆಸರಿನಲ್ಲಿ ಅವಮಾನಿಸುವಂತೆ ಚಿತ್ರಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.
48 ಗಂಟೆಗಳ ಗಡುವಿನೊಂದಿಗೆ ಕಾನೂನು ನೋಟಿಸ್
ಈ ವಿವಾದಾತ್ಮಕ ಜಾಹೀರಾತು ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಅಮೆಜಾನ್ ಇಂಡಿಯಾಗೆ ಕಾನೂನು ನೋಟಿಸ್ ಜಾರಿಗೊಳಿಸಿದೆ. ಜಾಹೀರಾತನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಹಾಗೂ 48 ಗಂಟೆಗಳೊಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ನೋಟಿಸ್‌ನಲ್ಲಿ ಆಗ್ರಹಿಸಲಾಗಿದೆ.
ಈ ಬೆಳವಣಿಗೆಯ ನಡುವೆಯೇ ಎಕ್ಸ್ (ಟ್ವಿಟರ್) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಮೆಜಾನ್ ವಿರುದ್ಧ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ಭಾರತದ ಸಂಸ್ಕೃತಿ, ಐತಿಹಾಸಿಕ ವ್ಯಕ್ತಿತ್ವಗಳು ಮತ್ತು ಮಹಾನ್ ಚಿಂತಕರನ್ನು ವಾಣಿಜ್ಯ ಜಾಹೀರಾತುಗಳಲ್ಲಿ ಬಳಸುವಾಗ ಅಂತರರಾಷ್ಟ್ರೀಯ ಕಂಪನಿಗಳು ಹೆಚ್ಚು ಜವಾಬ್ದಾರಿಯಿಂದ ಹಾಗೂ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ನೆಟಿಜನ್‌ಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ಈ ವಿವಾದದ ಕುರಿತು ಅಮೆಜಾನ್ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.

