ಬೆಂಗಳೂರು: ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ತವರು ಕ್ಷೇತ್ರದ ಜನರ ಭೇಟಿಗೆ ಹೊರಟ ಸಿಎಂ ಡಿ.ಕೆ.ಶಿವಕುಮಾರ್ ಅವರು ಜೀರೋ ಟ್ರಾಫಿಕ್ ನಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ವಿಧಾನಸೌಧದಿಂದ ಕನಕಪುರ ರಸ್ತೆವರೆಗೂ ಮೆಟ್ರೋ ಮೂಲಕ ಪ್ರಯಾಣ ಬೆಳೆಸಿದರು.
ಡಾ. ಬಿ.ಆರ್.ಅಂಬೇಡ್ಕರ್ ಮೆಟ್ರೋ ನಿಲ್ದಾಣದಲ್ಲಿ ಕೆಲಹೊತ್ತು ದಿನ ಪತ್ರಿಕೆಗಳ ಮೇಲೆ ಕಣ್ಣಾಡಿಸಿದ ಸಿಎಂ ನಂತರ ಮೆಟ್ರೋ ಪ್ರಯಾಣಿಕರಿಗೆ ಹಸ್ತಲಾಘವ ಮಾಡಿದರು. ಯುವಕ ಯುವತಿಯರು “ನಮ್ಮ ಸಿಎಂ” ಎಂದು ಹುಮ್ಮಸ್ಸಿನಿಂದ ಮಾತನಾಡಿಸಿ ಹಸ್ತಲಾಘವ ಮಾಡಿದರು. ಅನೇಕರು ಮುಖ್ಯಮಂತ್ರಿಗಳ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ನಿಲ್ದಾಣದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, ನನ್ನ ಕ್ಷೇತ್ರದ ಜನ ದೊಡ್ಡಆಲಳ್ಳಿಯಿಂದ ನನ್ನನ್ನು ಇಲ್ಲಿಯವರೆಗೆ ಕರೆತಂದಿದ್ದಾರೆ. ಕ್ಷೇತ್ರದ ಜನರು ನನ್ನನ್ನು ಭೇಟಿಯಾಗಬೇಕು ಎಂದು ಕೇಳುತ್ತಿದ್ದರು. ಅದಕ್ಕೆ ನನ್ನ ಕ್ಷೇತ್ರ, ನನ್ನ ಜನತೆ ಭೇಟಿಯಾಗುತ್ತಿದ್ದೇನೆ ಎಂದು ಹೇಳಿದರು.
ನನ್ನ ಕ್ಷೇತ್ರದ ಜನತೆಯ ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಕ ಮಾಡುತ್ತೇನೆ. ನನ್ನ ಕ್ಷೇತ್ರದ ಜನತೆ ಎಂದೂ ತೊಂದರೆಕೊಟ್ಟವರಲ್ಲ. ಅವರವರ ಕೆಲಸ ನೋಡಿಕೊಂಡು ಹೋಗುತ್ತಿದ್ದಾರೆ. ನನ್ನ ಕ್ಷೇತ್ರದ ಜನಕ್ಕೆ ರಾಜಕೀಯ ತಿಳುವಳಿಕೆ, ಪ್ರಜ್ಞೆಯಿದೆ. ನನ್ನಿಂದ ಅಪೇಕ್ಷೆ ಮಾಡದೇ ಹೋದರೂ ನಾನು ಅವರ ಸೇವೆ ಮಾಡಬೇಕಿರುವುದು ನನ್ನ ಕರ್ತವ್ಯ ಎಂದರು.
ನನ್ನ ಜನರಿಗೆ ಕೃತಜ್ಞತೆ ಸಲ್ಲಿಸಬೇಕು. ಅವರ ಭಾವನೆ, ಶ್ರಮಕ್ಕೆ ತಕ್ಕ ಫಲ ಸಿಗಬೇಕು. ಸಾತನೂರು ಕ್ಷೇತ್ರ, ದೊಡ್ಡಾಲಹಳ್ಳಿ ಜಿಲ್ಲಾ ಪಂಚಾಯತಿ, ಕನಕಪುರದ ಜನ ನನ್ನ ಭೇಟಿ ಮಾಡಬೇಕು ಎಂದು ಹೇಳುತ್ತಿದ್ದರು. ಅವರಿಗೆ ಸಮಯ ನೀಡುವುದಕ್ಕೆ ಆಗಿರಲಿಲ್ಲ. ಯಾರೂ ಬೆಂಗಳೂರಿಗೆ ಬರಬೇಡಿ ಅಂತ ಮನವಿ ಮಾಡಿದ್ದೆ. ಆದ ಕಾರಣಕ್ಕೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೇನೆ ಎಂದರು.
ನನ್ನ ಕ್ಷೇತ್ರದ ಜನ ವಿಧಾನಸೌಧದ ಮೆಟ್ಟಿಲು ಹತ್ತಿಸಿದ್ದಾರೆ.ಕಳೆದ 40 ವರ್ಷಗಳಿಂದ ಬೆಳೆಸಿದ್ದಾರೆ ಮೊದಲು ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿರೋದು ನನ್ನ ಕರ್ತವ್ಯ. ಅದಕ್ಕೆ ಎಲ್ಲಾ ಕೆಲಸ ಮುಗಿಸಿ ಜನರ ಭೇಟಿಗೆ ಹೋಗುತ್ತಿದ್ದೇನೆ ಎಂದು ಹೇಳಿದರು.
ಗೃಹ ಬಳಕೆಯ ಸಿಲಿಂಡರ್ ದರ ಏರಿಕೆ ವಿಚಾರವಗೈ ಮಾತನಾಡಿದ ಡಿ.ಕೆ.ಶಿವಕುಮಾರ್, ಅದಕ್ಕೆ ಪ್ರತ್ಯೇಕ ವರದಿ ಕೇಳಿದ್ದೇನೆ. ಇದಕ್ಕಿಂತ ಇಂಡಸ್ಟ್ರಿಯಲ್ ಗ್ಯಾಸ್ ಬೆಲೆ, ಡೀಸೆಲ್ ಬೆಲೆ ಏರಿಕೆ ಗಾಬರಿ ಆಗುವಂತೆ ಏರಿಕೆ ಮಾಡಿದ್ದಾರೆ. ವರದಿ ತೆಗೆದುಕೊಳ್ಳುತ್ತಿದ್ದೇನೆ. ಸೋಮವಾರದಂದು ಇದರ ಬಗ್ಗೆ ಮಾತನಾಡುತ್ತೇನೆ ಎಂದರು.

