ನಿನ್ನೆ ( ಜೂನ್ 6 ) ಬಿಸಿಸಿಐ ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಿತು. ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದಂತೆ ಸೂರ್ಯಕುಮಾರ್ ಯಾದವ್ ನಾಯಕತ್ವವನ್ನು ಕಳೆದುಕೊಂಡಿದ್ದು, ಬಿಸಿಸಿಐ ಶ್ರೇಯಸ್ ಐಯ್ಯರ್ ಪಾಲಿಗೆ ನಾಯಕತ್ವದ ಜವಾಬ್ದಾರಿಯನ್ನು ಹಾಕಿತು.
ಹೀಗೆ ಇದೇ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಸೂರ್ಯಕುಮಾರ್ ಯಾದವ್‌ಗೆ ಬಿಸಿಸಿಐ ಆಟಗಾರರು ಶಾಕ್ ಕೊಟ್ಟಿದ್ದು, ನಾಯಕತ್ವ ಕಸಿದುಕೊಳ್ಳುವುದು ಮಾತ್ರವಲ್ಲದೇ ಆಟಗಾರನಾಗಿಯೂ ಸಹ ತಂಡದಲ್ಲಿ ಮುಂದುವರಿಸುತ್ತಿಲ್ಲ.
ಹೀಗೆ ಭಾರೀ ಹಿನ್ನಡೆ ಅನುಭವಿಸಿದ ದಿನವೇ ಸೂರ್ಯಕುಮಾರ್ ಯಾದವ್ ತನ್ನ ಜಾಗಕ್ಕೆ ನಾಯಕನಾಗಿ ಆಯ್ಕೆಯಾಗಿರುವ ಶ್ರೇಯಸ್ ಐಯ್ಯರ್ ಎದುರು ಮುಖಾಮುಖಿಯಾಗಿದ್ದಾರೆ. ಹೌದು, ಪ್ರಸ್ತುತ ನಡೆಯುತ್ತಿರುವ ಮುಂಬೈ ಟಿ ಟ್ವೆಂಟಿ ಲೀಗ್ ಟೂರ್ನಿಯ 12ನೇ ಪಂದ್ಯ ನಿನ್ನೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು, ಟ್ರಂಪ್ಸ್ ನೈಟ್ಸ್ ಮುಂಬೈ ನಾರ್ತ್ ಈಸ್ಟ್ ಹಾಗೂ ಮುಂಬೈ ಫಾಲ್ಕನ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಸೂರ್ಯಕುಮಾರ್ ನಾಯಕತ್ವದ ಟ್ರಂಪ್ಸ್ ನೈಟ್ಸ್ ಮುಂಬೈ ನಾರ್ತ್ ಈಸ್ಟ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಕಲೆಹಾಕಿ ಮುಂಬೈ ಫಾಲ್ಕನ್ಸ್ ತಂಡಕ್ಕೆ 148 ರನ್‌ಗಳ ಸುಲಭ ಗುರಿ ನೀಡಿತು. ತಂಡದ ಪರ ನಾಯಕ ಸೂರ್ಯಕುಮಾರ್ ಯಾದವ್ 24 ಎಸೆತಗಳಲ್ಲಿ 48 ರನ್ ಹಾಗೂ ನೂತನ್ ಕುಮಾರ ಗೊಯೆಲ್ 34 ರನ್ ಬಾರಿಸಿದ್ದು ಬಿಟ್ಟರ ಉಳಿದ ಆಟಗಾರರಾರೂ ಸಹ ಇಪ್ಪತ್ತು ರನ್ ಮುಟ್ಟಲಿಲ್ಲ.
ಇನ್ನು ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಫಾಲ್ಕನ್ಸ್ ಶ್ರೇಯಸ್ ಐಯ್ಯರ್ ಅರ್ಧಶತಕದ ನೆರವಿನಿಂದ 16.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ 5 ವಿಕೆಟ್‌ಗಳ ಗೆಲುವನ್ನು ದಾಖಲಿಸಿತು. ಶ್ರೇಯಸ್ ಐಯ್ಯರ್ 36 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 61 ರನ್ ಚಚ್ಚಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.

