ನವದೆಹಲಿ: ಭಾರತೀಯ ಕೌಟುಂಬಿಕ ವ್ಯವಸ್ಥೆ ಹಾಗೂ ಐಪಿಸಿ ಸೆಕ್ಷನ್ 498ಎ ಕಾಯ್ದೆಯ ದುರುಪಯೋಗಕ್ಕೆ ಸಂಬಂಧಿಸಿದಂತೆ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ (Supreme Court) ಜೂನ್ 05 ರಂದು ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ತೀರ್ಪೊಂದನ್ನು ಪ್ರಕಟಿಸಿದೆ. “ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಹಾಗೂ ಅದರ ಭಾಗವಾಗಿ ಕೆಲವು ದಿನಗಳ ಕಾಲ ದಂಪತಿಗಳ ನಡುವೆ ಮಾತುಕತೆ ನಿಲ್ಲುವುದು ಸಹಜ ಪ್ರಕ್ರಿಯೆ. ಪತಿಯಾದವನು ಕೇವಲ ಪತ್ನಿಯೊಂದಿಗೆ ದಿನಗಟ್ಟಲೆ ಮಾತನಾಡಲಿಲ್ಲ ಅಥವಾ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಆತನನ್ನು ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಕ್ರೌರ್ಯ (Cruelty) ಎಸಗಿದ್ದಾನೆ ಎಂದು ಬಿಂಬಿಸಲು ಸಾಧ್ಯವಿಲ್ಲ” ಎಂದು ಸರ್ವೋಚ್ಚ ನ್ಯಾಯಾಲಯ ಕಡಕ್ ಆಗಿ ಹೇಳಿದೆ.
ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ವಿಚಾರಣಾ ನ್ಯಾಯಾಲಯ ಮತ್ತು ಮದ್ರಾಸ್ ಹೈಕೋರ್ಟ್ ವಿಧಿಸಿದ್ದ 3 ವರ್ಷಗಳ ಜೈಲು ಶಿಕ್ಷೆಯ ತೀರ್ಪನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಅಲ್ಲದೆ ಪತಿ ಹಾಗೂ ಆತನ ಕುಟುಂಬಸ್ಥರನ್ನು ಕಳಂಕಮುಕ್ತಗೊಳಿಸಿ (ಖುಲಾಸೆ) ಆದೇಶ ಹೊರಡಿಸಿದೆ.
13 ದಿನಗಳ ಮೌನ ಮತ್ತು ಆತ್ಮಹತ್ಯೆಯ ಹಿನ್ನೆಲೆ:
ಈ ಹೈ-ಪ್ರೊಫೈಲ್ ಪ್ರಕರಣದ ಇನ್‌ಸೈಡ್ ಸ್ಟೋರಿ ನೋಡುವುದಾದರೆ, ಮದುವೆಯಾದ ಕೆಲವು ದಿನಗಳ ನಂತರ ಮಹಿಳೆಯು ವೀಸಾ ಪ್ರಕ್ರಿಯೆಯ ತಾಂತ್ರಿಕ ಕಾರಣಗಳಿಂದಾಗಿ ಮಸ್ಕತ್‌ನಲ್ಲಿದ್ದ ತನ್ನ ಪತಿಯೊಂದಿಗೆ ವಿದೇಶಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಪಾಸ್‌ಪೋರ್ಟ್ ಪ್ರಕ್ರಿಯೆಗಳು ಬಾಕಿ ಇದ್ದಿದ್ದರಿಂದ ಆಕೆ ತನ್ನ ಪೋಷಕರ ಮನೆಯಲ್ಲೇ ವಾಸವಿದ್ದರು. ಈ ವೇಳೆ ಕೌಟುಂಬಿಕ ಅಸಮಾಧಾನದ ಹಿನ್ನೆಲೆಯಲ್ಲಿ ಪತಿಯು ಸುಮಾರು 13 ದಿನಗಳ ಕಾಲ ದೂರವಾಣಿ (ಫೋನ್) ಮೂಲಕ ಪತ್ನಿಯೊಂದಿಗೆ ಮಾತನಾಡಲು ನಿರಾಕರಿಸಿದ್ದರು.
ಇದರಿಂದ ತೀವ್ರ ಮನನೊಂದ ಮಹಿಳೆ ತನ್ನ ತಂದೆಯ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಮಹಿಳೆಯ ಪೋಷಕರು “ಮದುವೆ ವೇಳೆ 3 ಲಕ್ಷ ರೂ. ನಗದು, 20 ಸವರನ್ ಚಿನ್ನ ನೀಡಿದರೂ ಹೆಚ್ಚುವರಿ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗಿದೆ. ಪತ್ನಿ ತವರು ಮನೆಗೆ ಬಂದಿದ್ದಕ್ಕೆ ಅಸಮಾಧಾನಗೊಂಡು ಪತಿ ಫೋನ್‌ನಲ್ಲಿ ಮಾತನಾಡದೆ ಮಾನಸಿಕ ಹಿಂಸೆ ನೀಡಿದ್ದಾನೆ” ಎಂದು ಆರೋಪಿಸಿ ಪತಿ, ಅತ್ತೆ-ಮಾವ ಸೇರಿದಂತೆ ಐವರ ವಿರುದ್ಧ ವರದಕ್ಷಿಣೆ ಕಿರುಕುಳದ ಮೊಕದ್ದಮೆ ದಾಖಲಿಸಿದ್ದರು. ಕೆಳ ನ್ಯಾಯಾಲಯಗಳು ಭಾವನಾತ್ಮಕವಾಗಿ ಈ ಮೌನವನ್ನೇ ಕಿರುಕುಳ ಎಂದು ಪರಿಗಣಿಸಿ ಪತಿಗೆ ಶಿಕ್ಷೆ ವಿಧಿಸಿದ್ದವು.
ಕೆಳಹಂತದ ಕೋರ್ಟ್‌ಗಳ ಆದೇಶ ತಳ್ಳಿಹಾಕಿದ ಸುಪ್ರೀಂ:
ಈ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಸುಪ್ರೀಂ ಕೋರ್ಟ್, ಪ್ರಮುಖ ಕಾನೂನು ಸೂತ್ರಗಳನ್ನು ಮರು-ವ್ಯಾಖ್ಯಾನಿಸಿದೆ ಸಾಕ್ಷ್ಯಾಧಾರಗಳ ಕೊರತೆ ಇಂತಹ ಗಂಭೀರ ಪ್ರಕರಣಗಳಲ್ಲಿ, ಆರೋಪಿಸಲಾದ ಕೃತ್ಯಗಳ ತೀವ್ರತೆ ಮತ್ತು ಗಂಭೀರತೆ ಎಷ್ಟಿರಬೇಕೆಂದರೆ, ಅದು ಮಹಿಳೆಯನ್ನು ಆತ್ಮಹತ್ಯೆಗೆ ತಳ್ಳುವಂತೆ ಅಥವಾ ಆಕೆಯ ಮಾನಸಿಕ ಆರೋಗ್ಯಕ್ಕೆ ತೀವ್ರ ಅಪಾಯವನ್ನು ಉಂಟುಮಾಡುವಂತಿರಬೇಕು. ಕೇವಲ 13 ದಿನಗಳ ಕಾಲ ಫೋನ್‌ನಲ್ಲಿ ಮಾತನಾಡದಿರುವುದು ಅಥವಾ ಪತ್ನಿ ಪೋಷಕರ ಮನೆಗೆ ಹೋಗಿದ್ದಕ್ಕೆ ಪತಿ ಅಸಮಾಧಾನ ವ್ಯಕ್ತಪಡಿಸುವುದು ಸಾಮಾನ್ಯ ದಾಂಪತ್ಯದ ಭಾಗವೇ ಹೊರತು, ಅದು ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವಂತಹ ಗಂಭೀರ ಅಪರಾಧವಲ್ಲ.
ಸಾಬೀತುಪಡಿಸುವ ಹೊರೆ ಪ್ರಾಸಿಕ್ಯೂಷನ್ ಮೇಲಿದೆ: ಐಪಿಸಿ ಸೆಕ್ಷನ್ 498A ಅಡಿಯಲ್ಲಿ ಸುಳ್ಳು ಅಥವಾ ಸಾಕ್ಷ್ಯರಹಿತ ಆರೋಪಗಳು ಬಂದಾಗ, ತಾವು ನಿರಪರಾಧಿಗಳು ಎಂದು ಸಾಬೀತುಪಡಿಸುವ ಹೊರೆ ಆರೋಪಿಗಳ ಮೇಲಿರುವುದಿಲ್ಲ. ಬದಲಿಗೆ ಆರೋಪ ಹೊರಿಸಿದ ಪ್ರಾಸಿಕ್ಯೂಷನ್ ಕಡೆಯವರೇ ಪತಿಯು ನಿಜಕ್ಕೂ ಮಹಿಳೆಗೆ ಮಾನಸಿಕವಾಗಿ ತೀವ್ರ ಹಿಂಸೆ ನೀಡಿದ್ದಾನೆಯೇ ಎಂಬುದನ್ನು ಬಲವಾದ ಪುರಾವೆಗಳೊಂದಿಗೆ ಸಂಶಯಾತೀತವಾಗಿ ಸಾಬೀತುಪಡಿಸಬೇಕು.
ತಾಂತ್ರಿಕ ಕಾರಣ: ಪತ್ನಿ ಮಸ್ಕತ್‌ಗೆ ಪ್ರಯಾಣ ಬೆಳೆಸಲು ಸಾಧ್ಯವಾಗದಿರಲು ಪಾಸ್‌ಪೋರ್ಟ್ ಪ್ರಕ್ರಿಯೆಗಳು ಬಾಕಿ ಇದ್ದದ್ದು ಮತ್ತು ವೀಸಾ ಸಿಗದೇ ಇದ್ದದ್ದೇ ಕಾರಣವೇ ಹೊರತು ಅದರಲ್ಲಿ ಪತಿಯ ನಿರ್ಲಕ್ಷ್ಯವಿಲ್ಲ ಎಂಬುದನ್ನು ಕೋರ್ಟ್ ಸ್ಪಷ್ಟಪಡಿಸಿದೆ.

