ಬೆಂಗಳೂರು : ಸೂರ್ಯ ಹುಟ್ಟದ ದಿನವನ್ನಾದರೂ ನೋಡಬಹುದು, ಆದರೆ ಕಾಂಗ್ರೆಸ್ನಲ್ಲಿ ಒಳಜಗಳ ಇಲ್ಲದ ದಿನವನ್ನ ನೋಡಲು ಸಾಧ್ಯವೇ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಆಂತರಿಕ ಭಿನ್ನಮತದ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ವ್ಯಂಗ್ಯವಾಡಿದ್ದಾರೆ. ನಗರಾಭಿವೃದ್ದಿ ಖಾತೆಗೆ ಪಟ್ಟು ಹಿಡಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಮಲಿಂಗಾ ರೆಡ್ಡಿ ವಿಚಾರಕ್ಕೆ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಆರ್.ಅಶೋಕ್ ಟ್ವೀಟ್
ಕನ್ನಡಿಗರು ಬಹುಶಃ ಒಂದು ದಿನ ಸೂರ್ಯನೇ ಹುಟ್ಟದ ನೋಡಬಹುದೇನೋ, ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಒಳಜಗಳ ಇಲ್ಲದ ದಿನವನ್ನ ನೋಡಲು ಸಾಧ್ಯವೇ ಇಲ್ಲ. ಇನ್ನು ಎರಡು ವರ್ಷ ನಡೆಯಲಿರುವ @DKShivakumar ಸರ್ಕಾರದ ಈ ನಿತ್ಯ ಕಚ್ಚಾಟಕ್ಕೆ ತೇಪೆ ಹೆಚ್ಚಲು ರಾಹುಲ್ ಗಾಂಧಿ ಅವರು, ಕೆ.ಸಿ. ವೇಣುಗೋಪಾಲ್ ಅವರು, ರಣದೀಪ್ ಸೂರ್ಜೆವಾಲ ಅವರು ಬೆಂಗಳೂರಿನಲ್ಲೇ ಒಂದು ಮನೆ ಮಾಡಿಕೊಂಡು ಇಲ್ಲೇ ಇದ್ದುಬಿಟ್ಟರೆ ಒಳ್ಳೆಯದು ಎಂದಿದ್ದಾರೆ.
ರಾಮಲಿಂಗಾ ರೆಡ್ಡಿ ರಾಜೀನಾಮೆ
ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಸಚಿವ ಸಂಪುಟದಲ್ಲಿ ಅಸಮಾಧಾನದ ಕಿಡಿ ಸ್ಫೋಟಗೊಂಡಿದೆ. ತಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗಲಿಲ್ಲ ಎಂಬ ಕಾರಣಕ್ಕೆ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
·ಖಾತೆ ಹಂಚಿಕೆಯಲ್ಲಿ ಅಸಮಾಧಾನ: ನೂತನ ಸರ್ಕಾರದಲ್ಲಿ ರಾಮಲಿಂಗಾ ರೆಡ್ಡಿ ಅವರಿಗೆ ‘ಜಲಸಂಪನ್ಮೂಲ’ ಖಾತೆಯನ್ನು ನೀಡಲಾಗಿತ್ತು. ಆದರೆ, ತಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯೇ ಬೇಕೆಂದು ಅವರು ಪಟ್ಟು ಹಿಡಿದಿದ್ದರುಮನವೊಲಿಸುವ ಕಾಂಗ್ರೆಸ್ ನಾಯಕರ ಪ್ರಯತ್ನಗಳ ಹೊರತಾಗಿಯೂ, ಬೆಂಗಳೂರಿನ ಕೋರಮಂಗಲದಲ್ಲಿರುವ ತಮ್ಮ ಕಚೇರಿಯಲ್ಲಿ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಮಾಡಿ ಸಲ್ಲಿಸಿದ್ದಾರೆ. ಹಿಂದೆ ಡಿ.ಕೆ. ಶಿವಕುಮಾರ್ ಅವರು ಡಿಸಿಎಂ ಆಗಿದ್ದಾಗ, ತಾವು ಮುಖ್ಯಮಂತ್ರಿಯಾದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ರಾಮಲಿಂಗಾ ರೆಡ್ಡಿ ಅವರಿಗೆ ನೀಡುವ ಭರವಸೆ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ. ಆದರೆ, ಸದ್ಯ ಈ ಖಾತೆಯನ್ನು ಕೃಷ್ಣಭೈರೇಗೌಡ ಅವರಿಗೆ ಹಂಚಿಕೆ ಮಾಡಲಾಗಿದೆ.
·ಸಚಿವರ ಅಸಮಾಧಾನದ ಕಾರಣ: “ಜಲಸಂಪನ್ಮೂಲ ಖಾತೆಯನ್ನು ಅರ್ಥಮಾಡಿಕೊಳ್ಳಲು ನನಗೆ ಕನಿಷ್ಠ ಆರು ತಿಂಗಳು ಬೇಕು, ನನಗೆ ಈ ಖಾತೆ ಬೇಡ” ಎಂದು ರಾಮಲಿಂಗಾ ರೆಡ್ಡಿ ಮೊದಲೇ ತಮ್ಮ ಅಸಮಾಧಾನವನ್ನು ಹೈಕಮಾಂಡ್ ಮತ್ತು ಸಿಎಂ ಗಮನಕ್ಕೆ ತಂದಿದ್ದರು ಎಂದು ಹೇಳಲಾಗಿದೆ.

