HomeIndiaಸಹೋದ್ಯೋಗಿಯಿಂದ ಮತಾಂತರಕ್ಕೆ ಕಿರುಕುಳ, ದೂರು ನೀಡಿದ್ದಕ್ಕೆ ಬಲವಂತವಾಗಿ ವಜಾ: Wipro ಮಾಜಿ ಐಟಿ ಉದ್ಯೋಗಿಯ ಗಂಭೀರ...

ಸಹೋದ್ಯೋಗಿಯಿಂದ ಮತಾಂತರಕ್ಕೆ ಕಿರುಕುಳ, ದೂರು ನೀಡಿದ್ದಕ್ಕೆ ಬಲವಂತವಾಗಿ ವಜಾ: Wipro ಮಾಜಿ ಐಟಿ ಉದ್ಯೋಗಿಯ ಗಂಭೀರ ಆರೋಪ 50 ಲಕ್ಷ ಪರಿಹಾರಕ್ಕೆ ನೋಟಿಸ್

ಪುಣೆ: ದೇಶದ ಮುಂಚೂಣಿ ಮಾಹಿತಿ ತಂತ್ರಜ್ಞಾನ (IT) ಸಂಸ್ಥೆಗಳಲ್ಲೊಂದಾದ ‘ವಿಪ್ರೋ ಟೆಕ್ನಾಲಜೀಸ್’ (Wipro Technologies) ವಿರುದ್ಧ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಗಂಭೀರ ಮತಾಂತರದ ಕಿರುಕುಳ ಹಾಗೂ ತಾರತಮ್ಯದ ಆರೋಪ ಮಾಡಿರುವುದು ಐಟಿ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.

ಕೆಲಸದ ಸ್ಥಳದಲ್ಲಿ ಕೇವಲ ಧರ್ಮದ ಆಧಾರದ ಮೇಲೆ ತಮಗೆ ಮಾನಸಿಕ ಕಿರುಕುಳ ನೀಡಲಾಗಿದೆ, ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಸಹೋದ್ಯೋಗಿಗಳಿಂದ ಒತ್ತಡ ಹೇರಲಾಗಿದೆ ಹಾಗೂ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಆರೋಪಿಸಿ ಮಹಿಳೆ ಈಗ ವಿಪ್ರೋ ಸಂಸ್ಥೆಗೆ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ. ಇತ್ತೀಚೆಗಷ್ಟೇ ನಾಸಿಕ್‌ನ ಟಿಸಿಎಸ್ (TCS) ಕಂಪನಿಯಲ್ಲಿ ಇಂತಹುದೇ ಮತಾಂತರದ ಕಿರುಕುಳದ ಘಟನೆ ಸದ್ದು ಮಾಡಿತ್ತು. ಆ ಬಿಸಿ ಆರುವ ಮುನ್ನವೇ ಪುಣೆಯ ಹಿಂಜಾವಾಡಿ ಕ್ಯಾಂಪಸ್‌ನಲ್ಲಿರುವ ವಿಪ್ರೋ ಸಂಸ್ಥೆಯಲ್ಲೂ ಈ ಕಹಿ ಘಟನೆ ಬೆಳಕಿಗೆ ಬಂದಿದೆ.

ಇಸ್ಲಾಂಗೆ ಮತಾಂತರವಾದ್ರೆ ವಿದೇಶಿ ಉದ್ಯೋಗದ ಆಮಿಷ ಒಡ್ಡಿದ್ರು – ಸಂತ್ರಸ್ತೆಯ ಶಾಕಿಂಗ್ ಕಥೆ

ಪುಣೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತ ಮಾಜಿ ಮಹಿಳಾ ಉದ್ಯೋಗಿ ತಮಗಾದ ಭೀಕರ ಅನುಭವವನ್ನು ಬಿಚ್ಚಿಟ್ಟಿದ್ದಾರೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ನಾನು ವಿಪ್ರೋ ಸಂಸ್ಥೆಯ ಹಿಂಜಾವಾಡಿ ಕ್ಯಾಂಪಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ನನ್ನ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯೊಬ್ಬ ನನ್ನ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ. ಹಿಂದೂ ನಂಬಿಕೆಯನ್ನು ತ್ಯಜಿಸಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದ. ಅಷ್ಟೇ ಅಲ್ಲದೆ, ಮುಸ್ಲಿಂ ವ್ಯಕ್ತಿಯೊಬ್ಬರ ಜೊತೆ ಸಂಬಂಧ ಬೆಳೆಸುವಂತೆಯೂ ಬಲವಂತ ಮಾಡುತ್ತಿದ್ದ. ಒಂದು ವೇಳೆ ಧರ್ಮ ಬದಲಾಯಿಸಿದರೆ ಅತ್ಯುತ್ತಮ ಜೀವನಶೈಲಿ ಸಿಗುತ್ತದೆ ಹಾಗೂ ವಿದೇಶದಲ್ಲಿ ದೊಡ್ಡ ಉದ್ಯೋಗದ ಅವಕಾಶಗಳು ಲಭ್ಯವಾಗುತ್ತವೆ ಎಂದು ಆಮಿಷ ಒಡ್ಡುತ್ತಿದ್ದ. ನಾನು ಇದನ್ನು ಬಲವಾಗಿ ವಿರೋಧಿಸಿ, ಆತನೊಂದಿಗೆ ಕೇವಲ ಆಫೀಸ್ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದೆ.”

ನ್ಯಾಯ ಕೇಳಲು ಹೋದ್ರೆ ಹೆಚ್‌ಆರ್ (HR) ಮತ್ತು ಕಂಪನಿಯಿಂದಲೇ ಬಿಗ್ ಶಾಕ್

ಸಹೋದ್ಯೋಗಿಯ ಕಿರುಕುಳ ತಾಳಲಾರದೆ ಯುವತಿ ಕಂಪನಿಯ ಆಂತರಿಕ ಸಹಾಯದ ಮೊರೆ ಹೋಗಿದ್ದರು. ಆದರೆ ಅಲ್ಲಿ ಆಕೆಗೆ ಕಾದಿದ್ದು ಬಿಗ್ ಶಾಕ್ ಈ ಸೂಕ್ಷ್ಮ ವಿಚಾರವನ್ನು ಕಂಪನಿಯ ಹಿರಿಯ ಅಧಿಕಾರಿಗಳು ಹಾಗೂ ಮಾನವ ಸಂಪನ್ಮೂಲ (HR) ವಿಭಾಗದ ಗಮನಕ್ಕೆ ತಂದರೂ ಅವರು ಕಿರುಕುಳ ನೀಡಿದವನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬದಲಾಗಿ, ದೂರು ನೀಡಿದ ಯುವತಿಯ ವಿರುದ್ಧವೇ ವಿಪ್ರೋದ ಆಂತರಿಕ ಒಂಬಡ್ಸ್ ಸಮಿತಿಯ (Internal Committee) ಮುಂದೆ ಪ್ರತಿ-ದೂರು ದಾಖಲಾಗುವಂತೆ ನೋಡಿಕೊಳ್ಳಲಾಯಿತು.

ಆಂತರಿಕ ಸಮಿತಿಯ ಪಕ್ಷಪಾತ: ವಿಚಾರಣೆಯ ವೇಳೆ ಕಂಪನಿಯ ಅಧಿಕಾರಿಗಳು ಸಂಪೂರ್ಣ ಪಕ್ಷಪಾತದ ಧೋರಣೆ ತಳೆದರು. ಅಧಿಕೃತ ಮಾರ್ಗಗಳ ಮೂಲಕ ದೃಢವಾದ ಪುರಾವೆಗಳನ್ನು ಸಲ್ಲಿಸಿದರೂ ಯುವತಿಯ ವಾದವನ್ನು ಪರಿಗಣನೆಗೇ ತೆಗೆದುಕೊಳ್ಳಲಿಲ್ಲ.

ಮೈಕ್ರೋಸಾಫ್ಟ್ ಟೀಮ್ಸ್ ಮೀಟಿಂಗ್‌ನಲ್ಲಿ ಬಲವಂತದ ಹೊರಹಾಕುವಿಕೆ: ಅಂತಿಮವಾಗಿ 2025ರ ಆಗಸ್ಟ್‌ನಲ್ಲಿ ಕಂಪನಿಯ ಪ್ರತಿನಿಧಿಗಳು ಈಕೆಯನ್ನು ಮೈಕ್ರೋಸಾಫ್ಟ್ ಟೀಮ್ಸ್ (Microsoft Teams) ಆನ್‌ಲೈನ್ ಸಭೆಗೆ ಕರೆದು, ಯಾವುದೇ ನ್ಯಾಯಯುತ ಅವಕಾಶ ನೀಡದೆ, ತೀವ್ರ ಒತ್ತಡ ಹೇರಿ ಆಕೆಯ ಒಪ್ಪಿಗೆಯಿಲ್ಲದೆ ಬಲವಂತವಾಗಿ ರಾಜೀನಾಮೆ ಪಡೆದು ಕಂಪನಿಯಿಂದ ಹೊರಹಾಕಿದ್ದಾರೆ.

50 ಲಕ್ಷ ರೂಪಾಯಿ ಪರಿಹಾರ ಹಾಗೂ ಕ್ಷಮೆಯಾಚನೆಗೆ ವಕೀಲರ ಕಡಕ್ ನೋಟಿಸ್

ಸಂತ್ರಸ್ತೆಯ ಪರ ವಕೀಲ ವಿವೇಕ್ ಭೋಸ್ಲೆ ಮಾತನಾಡಿ, “ತೀವ್ರ ಮಾನಸಿಕ ಒತ್ತಡ ಹೇರಿ ಉದ್ಯೋಗಿಯಿಂದ ರಾಜೀನಾಮೆ ಪಡೆದಿರುವುದು ನೈಸರ್ಗಿಕ ನ್ಯಾಯ ಮತ್ತು ಕಾರ್ಮಿಕ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಪ್ರೋ ಸಂಸ್ಥೆಗೆ ಅಧಿಕೃತ ಕಾನೂನು ನೋಟಿಸ್ ನೀಡಲಾಗಿದ್ದು, ಪ್ರಮುಖ ಬೇಡಿಕೆಗಳನ್ನು ಇಡಲಾಗಿದೆ:

ಮಹಿಳಾ ಉದ್ಯೋಗಿಯ ರಾಜೀನಾಮೆಯನ್ನು ತಕ್ಷಣ ರದ್ದುಗೊಳಿಸಿ, ಗೌರವಯುತವಾಗಿ ಮರುನೇಮಕ ಮಾಡಿಕೊಳ್ಳಬೇಕು.ಮಾನಸಿಕ ಆಘಾತ ಮತ್ತು ಪ್ರತಿಷ್ಠೆಗೆ ಧಕ್ಕೆ ಉಂಟುಮಾಡಿದ ಕಾರಣಕ್ಕಾಗಿ 50 ಲಕ್ಷ ರೂ. ಪರಿಹಾರ ನೀಡಬೇಕು.ವಿಪ್ರೋ ಸಂಸ್ಥೆಯು ಅಧಿಕೃತವಾಗಿ ಕ್ಷಮೆಯಾಚಿಸಬೇಕು ಮತ್ತು ಕಿರುಕುಳ ನೀಡಿದವರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು.

ಮುಂದಿನ 15 ದಿನಗಳ ಒಳಗಾಗಿ ವಿಪ್ರೋ ಸಂಸ್ಥೆಯಿಂದ ಸೂಕ್ತ ಪ್ರತಿಕ್ರಿಯೆ ಬಾರದಿದ್ದರೆ, ಸಿವಿಲ್, ಕ್ರಿಮಿನಲ್ ಹಾಗೂ ಕಾರ್ಮಿಕ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ಮುಂದುವರಿಸುವುದಾಗಿ ವಕೀಲರು ಎಚ್ಚರಿಸಿದ್ದಾರೆ.

ಈ ಪ್ರಕರಣದ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದೆ. ಇತ್ತ ಘಟನೆಯನ್ನು ಕಟುವಾಗಿ ಖಂಡಿಸಿರುವ ಮಾಜಿ ಬಿಜೆಪಿ ರಾಜ್ಯಸಭಾ ಸದಸ್ಯ ಅಮರ್ ಶಂಕರ್ ಸಬಳೆ, ನಮ್ಮ ಹಿಂದೂ ಸಹೋದರಿಗೆ ಮತಾಂತರದ ಕಿರುಕುಳ ನಡೆದಿರುವ ಬಗ್ಗೆ ವಿಪ್ರೋ ಆಡಳಿತ ಮಂಡಳಿಗೆ ದೂರು ನೀಡಿದ್ದರೂ ಅದನ್ನು ನಿರ್ಲಕ್ಷಿಸಿರುವುದು ಖಂಡನೀಯ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಾರಿಗೆ ತಂದಿರುವ ಕಠಿಣ ಬುಲ್ಡೋಜರ್ ಸಂಸ್ಕೃತಿಯಂತಹ ಕಠಿಣ ನಿಯಮಗಳು ಇಂತಹ ಪ್ರಕರಣಗಳನ್ನು ಹತ್ತಿಕ್ಕಲು ಮಹಾರಾಷ್ಟ್ರದಲ್ಲೂ ಜಾರಿಯಾಗಬೇಕು” ಎಂದು ಗುಡುಗಿದ್ದಾರೆ.

ಸದ್ಯ ಇಡೀ ಕಾರ್ಪೊರೇಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಈ ಗಂಭೀರ ಆರೋಪಗಳ ಕುರಿತು ವಿಪ್ರೋ (Wipro) ಸಂಸ್ಥೆಯಿಂದ ಇನ್ನು ಯಾವುದೇ ಅಧಿಕೃತ ಸ್ಪಷ್ಟನೆ ಅಥವಾ ಪ್ರತಿಕ್ರಿಯೆ ಹೊರಬಂದಿಲ್ಲ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular