ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯ ಇಂದು ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಜೂನ್ 4ರ ಗುರುವಾರದಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯವು ಉಭಯ ತಂಡಗಳಿಗೂ ಅತ್ಯಂತ ಪ್ರಮುಖವಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಗೆಲುವು ಸಾಧಿಸಿದ್ದರೆ, ಎರಡನೇ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದ್ದ ಆಸ್ಟ್ರೇಲಿಯಾ ತಂಡವು ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಹೀಗಾಗಿ ಇಂದಿನ ಪಂದ್ಯವನ್ನು ಗೆಲ್ಲುವ ತಂಡವು ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.
ದ್ವಿತೀಯ ಪಂದ್ಯದಲ್ಲಿ ಆಸೀಸ್ ಭರ್ಜರಿ ಕಂಬ್ಯಾಕ್ ಮೊದಲ ಪಂದ್ಯ ಸೋತು ಹಿನ್ನಡೆಯಲ್ಲಿದ್ದ ಪ್ರವಾಸಿ ಆಸ್ಟ್ರೇಲಿಯಾ ತಂಡವು ಎರಡನೇ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ್ದ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ 231 ರನ್ಗಳಿಗೆ ಆಲೌಟ್ ಆಗಿತ್ತು. ಸಾಧಾರಣ ಮೊತ್ತ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಆಸೀಸ್ ಬೌಲರ್ಗಳು ಶಾಕ್ ನೀಡಿದರು. ಮಾರಕ ಬೌಲಿಂಗ್ ದಾಳಿ ಸಂಘಟಿಸಿದ ಆಸ್ಟ್ರೇಲಿಯಾ, ಪಾಕಿಸ್ತಾನ ತಂಡವನ್ನು ಕೇವಲ 190 ರನ್ಗಳಿಗೆ ನಿಯಂತ್ರಿಸುವ ಮೂಲಕ 43 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಆಸ್ಟ್ರೇಲಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ನಾಥನ್ ಎಲ್ಲಿಸ್ 4 ವಿಕೆಟ್ ಪಡೆದರೆ, ಮ್ಯಾಟ್ ಶಾರ್ಟ್ 3 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
28 ವರ್ಷಗಳ ಇತಿಹಾಸ ಬರೆಯುತ್ತಾ ಆಸ್ಟ್ರೇಲಿಯಾ? ಜೋಶ್ ಇಂಗ್ಲಿಸ್ ನಾಯಕತ್ವದ ಆಸ್ಟ್ರೇಲಿಯಾ ತಂಡಕ್ಕೆ ಇಂದಿನ ಪಂದ್ಯ ಅತ್ಯಂತ ಪ್ರತಿಷ್ಠಿತವಾಗಿದೆ. ಪಾಕಿಸ್ತಾನದ ಮಣ್ಣಿನಲ್ಲಿ 1998/99ರ ನಂತರ ಆಸ್ಟ್ರೇಲಿಯಾ ತಂಡವು ಯಾವುದೇ ಏಕದಿನ ಸರಣಿಯನ್ನು ಗೆದ್ದಿಲ್ಲ. ಇಂದಿನ ಪಂದ್ಯವನ್ನು ಗೆದ್ದರೆ ಬರೋಬ್ಬರಿ 28 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಬೀಳಲಿದ್ದು, ಪಾಕ್ ನೆಲದಲ್ಲಿ ಇತಿಹಾಸ ಬರೆಯುವ ಸುವರ್ಣ ಅವಕಾಶ ಆಸೀಸ್ ಪಡೆಗಿದೆ. ಮತ್ತೊಂದೆಡೆ ತವರಿನಲ್ಲಿ ಸರಣಿ ಕೈಬಿಡಬಾರದು ಎಂಬ ಹಠಕ್ಕೆ ಬಿದ್ದಿರುವ ಪಾಕಿಸ್ತಾನ ತಂಡವು ಇಂದಿನ ಪಂದ್ಯಕ್ಕಾಗಿ ಕಠಿಣ ತಂತ್ರ ರೂಪಿಸಿದೆ. ಒಟ್ಟಾರೆಯಾಗಿ ಲಾಹೋರ್ ಮೈದಾನದಲ್ಲಿ ಇಂದು ಕ್ರಿಕೆಟ್ ಪ್ರೇಮಿಗಳಿಗೆ ಜಿದ್ದಾಜಿದ್ದಿನ ಹೋರಾಟ ವೀಕ್ಷಿಸುವ ಅವಕಾಶ ಸಿಗಲಿದೆ.

