ಬೆಂಗಳೂರು: ರಾಜಭವನದ ಭವ್ಯ ಅಂಗಳದಲ್ಲಿ ಇಂದು ಇಡೀ ಕರ್ನಾಟಕವೇ ಹೆಮ್ಮೆಯಿಂದ ನೋಡುತ್ತಿದ್ದ ರಾಜಕೀಯ ಇತಿಹಾಸವೊಂದು ಸೃಷ್ಟಿಯಾಗಿದೆ. ಕಾಂಗ್ರೆಸ್ನ ಅಪ್ರತಿಮ ತಂತ್ರಗಾರ, ಕನಕಪುರ ಬಂಡೆ ಡಿ.ಕೆ. ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಲೋಕಭವನದಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಆದರೆ, ಇದೇ ಮಹಾ ಸಂಭ್ರಮದ ಕ್ಷಣದಲ್ಲಿ ವೇದಿಕೆಯ ಮುಂಭಾಗದಲ್ಲಿದ್ದ ಡಿಕೆಶಿ ಕುಟುಂಬದಲ್ಲಿ ಮಾತ್ರ ಅತ್ಯಂತ ಭಾವುಕ ವಾತಾವರಣ ನಿರ್ಮಾಣವಾಗಿತ್ತು.
ತಂದೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸುದೀರ್ಘ ಕಷ್ಟದ ಹಾದಿಯನ್ನು ಕಣ್ಣಾರೆ ಕಂಡಿದ್ದ ಮಗಳು ಐಶ್ವರ್ಯ ಹೆಗ್ಡೆ, ವೇದಿಕೆಯ ಮುಂಭಾಗದಲ್ಲೇ ಆನಂದಬಾಷ್ಪ ಸುರಿಸಿದರು. ತಂದೆಯ ಪಟ್ಟಾಭಿಷೇಕದ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಮಗಳು ಹಾಗೂ ಯುವ ಉದ್ಯಮಿ ಐಶ್ವರ್ಯ ಶಿವಕುಮಾರ್, “ಮುಖ್ಯಮಂತ್ರಿ ಸ್ಥಾನ ಕೇವಲ ಒಂದು ಕನಸಲ್ಲ, ಅದೊಂದು ಮಹತ್ತರ ಜವಾಬ್ದಾರಿ ಎಂದು ಮಾರ್ಮಿಕವಾಗಿ ನುಡಿದರು. “ತಂದೆಯ ದಶಕಗಳ ಕನಸು ಇಂದು ನನಸಾಗಿದೆ. ಆದರೆ, ಈ ಗದ್ದುಗೆಯನ್ನು ಏರುತ್ತಿದ್ದಂತೆ ಕನಸಿಗಿಂತಲೂ ನಾಡಿನ ಜನರ ಕಡೆಗಿನ ಜವಾಬ್ದಾರಿ ಹಿರಿದಾಗಿದೆ. ನನ್ನ ತಂದೆ ರಾಜ್ಯವನ್ನು ಪ್ರಗತಿಯ ಶಿಖರಕ್ಕೆ ಕೊಂಡೊಯ್ಯಲಿದ್ದಾರೆ ಎಂಬ ನಂಬಿಕೆ ನಮಗಿದೆ, ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತಂದೆಯ ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ಐಶ್ವರ್ಯ
ಡಿ.ಕೆ.ಶಿವಕುಮಾರ್ ಅವರು ವೀರ ಗಂಗಾಧರ ಅಜ್ಜನ ಹೆಸರಿನಲ್ಲಿ ಆಣೆ ಪ್ರಮಾಣ ಮಾಡುತ್ತಿದ್ದಂತೆ ಭಾವುಕರಾದ ಮಗಳು ಐಶ್ವರ್ಯ, ತಂದೆ ನಡೆದು ಬಂದ ಅಗ್ನಿಪರೀಕ್ಷೆಯ ದಿನಗಳನ್ನು ನೆನೆದರು.
ನನ್ನ ತಂದೆ ಈ ಸ್ಥಾನಕ್ಕೆ ಏರಲು ಪಟ್ಟಿರುವ ಶ್ರಮ, ಅನುಭವಿಸಿದ ಕಷ್ಟಗಳು ನಮಗೆ ಮಾತ್ರ ಗೊತ್ತು. ಸತತ 45 ವರ್ಷಗಳ ಕಾಲ ಅವರು ಜನರ ನಡುವೆಯೇ ಇದ್ದು, ಹಗಲಿರುಳು ಪಕ್ಷಕ್ಕಾಗಿ ದುಡಿದಿದ್ದಾರೆ. ಹಲವು ಸವಾಲುಗಳು, ಕಠಿಣ ಪರಿಸ್ಥಿತಿಗಳು ಎದುರಾದಾಗಲೂ ಅವರು ಧೃತಿಗೆಡಲಿಲ್ಲ. ಇಂದು ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ನಿಂತಿರುವುದನ್ನು ನೋಡಿ ಮಗಳಾಗಿ ನನ್ನ ಹೃದಯ ತುಂಬಿ ಬಂದಿದೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ.

