ಸಣ್ಣ ವ್ಯಾಪಾರಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪ್ರಧಾನ್ ಮಂತ್ರಿ ಸ್ವನಿಧಿ’ (PM SVANidhi) ಯೋಜನೆಯು ಯಶಸ್ವಿಯಾಗಿ ಆರು ವರ್ಷಗಳನ್ನು ಪೂರೈಸಿದೆ. 2020ರ ಜೂನ್ 1ರಂದು ಪ್ರಾರಂಭವಾದ ಈ ಯೋಜನೆಯು ಲಕ್ಷಾಂತರ ಬೀದಿ ಬದಿ ವ್ಯಾಪಾರಿಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನೆರವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೋವಿಡ್ ಮಹಾಮಾರಿಯ ಸಮಯದಲ್ಲಿ ತೀವ್ರ ನಷ್ಟ ಅನುಭವಿಸಿದ್ದ ಸಣ್ಣ ವ್ಯಾಪಾರಿಗಳಿಗೆ ಈ ಯೋಜನೆಯು ದೊಡ್ಡ ಆಸರೆಯಾಗಿದೆ.ಯೋಜನೆಯ ಆರು ವರ್ಷಗಳ ಪೂರ್ಣಗೊಂಡ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದು, ಯಾವುದೇ ಖಾತರಿ ಇಲ್ಲದೆ ಸಾಲ ಸೌಲಭ್ಯ ದೊರೆತಿರುವುದು ವ್ಯಾಪಾರಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ ಎಂದಿದ್ದಾರೆ. ಇದು ‘ನಂಬಿಕೆ’ ಮತ್ತು ‘ಸಬಲೀಕರಣ’ ಎಂಬ ಎರಡು ಪ್ರಮುಖ ತತ್ವಗಳ ಮೇಲೆ ಆಧಾರಿತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾಲದ ವಿವರಗಳು:
- ಸರ್ಕಾರವು ಇತ್ತೀಚೆಗೆ ಈ ಯೋಜನೆಯನ್ನು 2030ರವರೆಗೆ ವಿಸ್ತರಿಸಿದ್ದು, ಸಾಲದ ಮಿತಿಯನ್ನು 80,000 ರೂಪಾಯಿಯಿಂದ 90,000 ರೂಪಾಯಿಗೆ ಹೆಚ್ಚಿಸಿದೆ.
- ಈ ಯೋಜನೆಯ ವಿಶೇಷತೆಯೆಂದರೆ, ಯಾವುದೇ ಆಸ್ತಿಯನ್ನು ಅಡಮಾನ ಇಡುವ ಅಥವಾ ಖಾತರಿ ನೀಡುವ ಅಗತ್ಯವಿಲ್ಲ.
- ಸಾಲವನ್ನು ಮೂರು ಕಂತುಗಳಲ್ಲಿ ವಿತರಿಸಲಾಗುತ್ತದೆ:
- ಮೊದಲ ಕಂತು: 15,000 ರೂ.
- ಎರಡನೇ ಕಂತು: 25,000 ರೂ.
- ಮೂರನೇ ಕಂತು: 50,000 ರೂ.
- ಒಂದು ಕಂತಿನ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸಿದ ನಂತರವೇ ಮುಂದಿನ ಕಂತಿನ ಸಾಲ ಮಂಜೂರಾಗುತ್ತದೆ. ಈ ರೀತಿಯಾಗಿ ಒಟ್ಟು 90,000 ರೂ. ವರೆಗೆ ಸಾಲ ಪಡೆಯುವ ಅವಕಾಶವಿದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಹೆಚ್ಚಿನ ದಾಖಲೆಗಳ ಅಗತ್ಯವಿಲ್ಲ, ಮುಖ್ಯವಾಗಿ ಆಧಾರ್ ಕಾರ್ಡ್ ಇದ್ದರೆ ಸಾಕು.
- ಸಾಲವನ್ನು ಸಣ್ಣ ಸಣ್ಣ ಇಎಂಐ (EMI) ರೂಪದಲ್ಲಿ ಮರುಪಾವತಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
- ಆಸಕ್ತರು ತಮ್ಮ ಹತ್ತಿರದ ಸರ್ಕಾರಿ ಬ್ಯಾಂಕ್‌ಗಳನ್ನು ಸಂಪರ್ಕಿಸಿ, ಅರ್ಜಿ ನಮೂನೆಯೊಂದಿಗೆ ಆಧಾರ್ ಕಾರ್ಡ್ ಪ್ರತಿ ಸಲ್ಲಿಸುವ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯು ಲಕ್ಷಾಂತರ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಬಲವನ್ನು ನೀಡಿದ್ದು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನವರಿಗೆ ಇದರ ಲಾಭ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

