ಕನ್ನಡದಲ್ಲಿ ಸಖತ್ ಫೇಮಸ್ ಆಗಿರುವ ಒಂದು ಗಾದೆ ಮಾತು ಇದೆ, ‘ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು’ ಅಂತಾ. ಅಂದಹಾಗೆ ಈ ಗಾದೆ ಮಾತನ್ನು ನೀವು ಕೂಡ ಒಂದಲ್ಲ ಒಂದು ಬಾರಿ ಕೇಳೇ ಕೇಳಿರುತ್ತೀರಿ. ಹೀಗಿದ್ದಾಗ ಕನ್ನಡದ ಈ ಗಾದೆ ಮಾತು ಅಮೆರಿಕ & ಇರಾನ್ ಜಗಳದಲ್ಲಿ ನಿಜವಾಗುತ್ತಿದೆ. ಒಂದು ಕಡೆ ಇಬ್ಬರ ನಡುವೆ ಈಗ ಸಂಧಾನ ನಡೆಸಿ, ಯುದ್ಧ ನಿಲ್ಲಿಸಿ ಇಬ್ಬರನ್ನೂ ಸೈಲೆಂಟ್ ಮಾಡಲು ಜಗತ್ತಿನ ದೊಡ್ಡ ದೊಡ್ಡ ದೇಶಗಳು ಬೆವರು ಹರಿಸಿವೆ. ಆದರೆ ಇಂತಹ ಸಮಯದಲ್ಲೇ ಅಮೆರಿಕ ತಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ ಅಂತಾ ರೊಚ್ಚಿಗೆದ್ದಿರುವ ಇರಾನ್ ಮಹತ್ವದ ನಿರ್ಧಾರ ಕೈಗೊಂಡಿದೆ. ಇರಾನ್ ಕೈಗೊಂಡಿರುವ ಈ ನಿರ್ಧಾರವೇ ಮತ್ತೊಂದು ಹಂತದಲ್ಲಿ ಭಯ ಹೆಚ್ಚಿಸಿದೆ. ಅಲ್ಲದೆ, ಗ್ಯಾಸ್ ಸಂಕಷ್ಟ ಮತ್ತಷ್ಟು ಉಲ್ಬಣ? ಬನ್ನಿ ತಿಳಿಯೋಣ.
ಅಮೆರಿಕ ತಾನು ಮಾತ್ರ ಜಗತ್ತಿನಲ್ಲಿ ಶಕ್ತಿಶಾಲಿ ಆಗಿರಬೇಕು, ನಂಬರ್-1 ಸ್ಥಾನದಲ್ಲಿಯೇ ಉಳಿಯಬೇಕು ಅಂತಾ ಎಲ್ಲಾ ರೀತಿ ಪ್ರಯತ್ನ ಮಾಡುತ್ತಲೇ ಇರುತ್ತದೆ. ಆದರೆ ರಷ್ಯಾ ಮತ್ತು ಚೀನಾ ಇದಕ್ಕೆ ವಿರುದ್ಧವಾಗಿ ಮತ್ತೊಂದು ಗುಂಪು ಕಟ್ಟಿಕೊಂಡು, ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳು ಜಗತ್ತಿಗೆ ಮೋಸ ಮಾಡುತ್ತಿವೆ ಎಂಬ ಆರೋಪ ಮಾಡುತ್ತಾ ಬಂದಿವೆ. ಹೀಗಿದ್ದಾಗ ಪಾಶ್ಚಿಮಾತ್ಯ ದೇಶಗಳ ಬದ್ಧವೈರಿ ಆಗಿರುವ ಇರಾನ್ ಮೇಲೆ ಕೆಲವು ದಿನಗಳ ಹಿಂದಷ್ಟೇ ಘನಘೋರ ಯುದ್ಧ ನಡೆದು ಜಸ್ಟ್ ತಣ್ಣಗಾಗಿದೆ ಅಷ್ಟೇ.

ಆದರೆ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡವಾಗಿದ್ದು, ಯಾವಾಗ ಬೇಕಾದರೂ ಇರಾನ್ ವಿರುದ್ಧ ಅಮೆರಿಕದ ಸೇನೆ ಮತ್ತೊಮ್ಮೆ ಯುದ್ಧ ಘೋಷಣೆ ಮಾಡಬಹುದು ಎಂಬ ಸ್ಥಿತಿ ನಿರ್ಮಾಣ ಆಗಿದೆ. ಹೀಗಿದ್ದಾಗ ಇರಾನ್ ಮತ್ತು ಅಮೆರಿಕ ನಡುವೆ ಸಂಧಾನ ಮಾಡಿಸಲು ಎಲ್ಲಾ ಪ್ರಯತ್ನ ಭಾರಿ ಜೋರಾಗಿ ಸಾಗಿದ್ದವು. ಆದರೆ ದಿಢೀರ್ ಇರಾನ್ ಗಟ್ಟಿ ನಿರ್ಧಾರ ಒಂದನ್ನ ಈಗ ತೆಗೆದುಕೊಂಡಿದ್ದು, ಅಮೆರಿಕ ಜೊತೆಗೆ ಯಾವುದೇ ಸಂಧಾನ ಮಾತುಕತೆ ನಡೆಸದೇ ಇರಲು ಮುಂದಾಗಿದೆ. ಈ ಸುದ್ದಿ ಹೊರಬಿದ್ದ ತಕ್ಷಣವೇ ಇಡೀ ಜಗತ್ತಿನ ಆರ್ಥಿಕತೆಗೆ ಮತ್ತೊಮ್ಮೆ ಬೆಂಕಿ ಬಿದ್ದಿದೆ!
ಟ್ರಂಪ್ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಇರಾನ್?
ಕದನ ವಿರಾಮ ಒಪ್ಪಂದ ಉಲ್ಲಂಘನೆ ಮುಂದುವರಿದರೆ ಅಮೆರಿಕ ಜೊತೆ ನಡೆಯುತ್ತಿರುವ ಎಲ್ಲಾ ರೀತಿ ಮಾತುಕತೆಗೂ ಬ್ರೇಕ್ ಹಾಕುವುದಾಗಿ ಇರಾನ್ ವಾರ್ನಿಂಗ್ ಕೊಟ್ಟಿದೆ. ಅಲ್ಲದೆ ಹೋರ್ಮುಜ್ ಜಲಸಂಧಿ ಸಂಪೂರ್ಣ ಮುಚ್ಚುವುದು ಸೇರಿ ಹಲವು ಕಠಿಣ ಕ್ರಮ ಕೈಗೊಳ್ಳುವುದಾಗಿ ಕೂಡ ಇರಾನ್ ಸರ್ಕಾರ ಎಚ್ಚರಿಕೆ ನೀಡಿರುವುದಾಗಿ, ಇರಾನ್ ದೇಶದ ಸ್ಥಳೀಯ ಸುದ್ದಿ ವಾಹಿನಿ ಅಂದ್ರೆ ಇರಾನ್ ಸರ್ಕಾರಿ ಟಿವಿ ಚಾನಲ್ ವರದಿ ಮಾಡಿದೆ.
ಅಷ್ಟಕ್ಕೂ ಲೆಬನಾನ್ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ಸೇನೆ ನಡೆಸುತ್ತಿರುವ ಬೃಹತ್ ಮಿಲಿಟರಿ ಕಾರ್ಯಾಚರಣೆ ನಡುವೆಯೇ ಈ ರೀತಿ ಇರಾನ್ ರಿಯಾಕ್ಷನ್ ಕೊಟ್ಟಿದ್ದು, ಅಮೆರಿಕದ ನಡೆ ಹೇಗಿರಲಿದೆ?? ಎಂಬ ಕುತೂಹಲದ ನಡುವೆಯೇ ದಿಢೀರ್ ಹೋರ್ಮುಜ್ ಜಲಸಂಧಿ ಸಂಪೂರ್ಣ ಬಂದ್ ಆಗಿ, ಗ್ಯಾಸ್ ಸಮಸ್ಯೆ ಹಾಗೂ ಪೆಟ್ರೋಲ್ & ಡೀಸೆಲ್ ಸಮಸ್ಯೆಯು ಮತ್ತಷ್ಟು ಹೆಚ್ಚಾಗುತ್ತಾ? ಎಂಬ ಆತಂಕ ಇದೀಗ ಪ್ರಪಂಚವನ್ನೇ ಆವರಿಸಿದೆ.
ಕಚ್ಚಾತೈಲ ಬೆಲೆ 600 ರೂಪಾಯಿ ಏರಿಕೆ!
ಇರಾನ್ ಹಿಂಗೆಲ್ಲಾ ಹೋರ್ಮುಜ್ ಜಲಸಂಧಿ ಸಂಪೂರ್ಣ ಬಂದ್ ಮಾಡುವ ಹಾಗೂ ಅಮೆರಿಕ ಜೊತೆಗೆ ಮಾತುಕತೆ ನಿಲ್ಲಿಸುವ ಬೆದರಿಕೆ ಹಾಕಿದ ನಂತರ ಅಲ್ಲೋಲ ಕಲ್ಲೋಲ ಉಂಟಾಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ, ಭರ್ಜರಿ 94 ಅಮೆರಿಕನ್ ಡಾಲರ್ ತಲುಪಿದೆ. ಈ ಮೂಲಕ ಸುಮಾರು ಶೇಕಡಾ 7ಕ್ಕೂ ಹೆಚ್ಚು ದರದಲ್ಲಿ ಇಂದು ಒಂದೇ ದಿನದಲ್ಲಿ ಏರಿಕೆ ಕಂಡಿದೆ ಕಚ್ಚಾತೈಲದ ಬೆಲೆ. ಅಂದರೆ ಪ್ರತಿ ಬ್ಯಾರಲ್ ಕಚ್ಚಾತೈಲ ಬೆಲೆ ಇಂದು ಒಂದೇ ದಿನ ಸುಮಾರು 600 ರೂಪಾಯಿ ಏರಿಕೆ ಕಂಡಿದೆ. ಹೀಗಿದ್ದಾಗ ಕೂಡ ಇರಾನ್ ಸರ್ಕಾರ ಇನ್ನೂ ಅಧಿಕೃತವಾಗಿ ಈ ಬಗ್ಗೆ ತನ್ನ ನಿರ್ಧಾರ ಪ್ರಕಟಿಸಿಲ್ಲ, ಅಕಸ್ಮಾತ್ ಪ್ರಕಟಿಸಿದರೆ ಆಗ ಜಾಗತಿಕ ತೈಲ ಮಾರುಕಟ್ಟೆ ಸೇರಿದಂತೆ ಷೇರು ಮಾರುಕಟ್ಟೆ ಕೂಡ ಪಲ್ಟಿ ಹೊಡೆಯುವ ಆತಂಕ ಆವರಿಸಿದೆ.

