HomeKarnatakaಶಾಂತಿ ಸಭೆಯಲ್ಲಿ ಮೂಡದ ಒಮ್ಮತ: ಜೂ. 4, 5 ರಂದು ನಡೆಯಬೇಕಿದ್ದ ಬೆಣಕಲ್ಲು ಜಾತ್ರೆ, ಕುಂಭೋತ್ಸವ...

ಶಾಂತಿ ಸಭೆಯಲ್ಲಿ ಮೂಡದ ಒಮ್ಮತ: ಜೂ. 4, 5 ರಂದು ನಡೆಯಬೇಕಿದ್ದ ಬೆಣಕಲ್ಲು ಜಾತ್ರೆ, ಕುಂಭೋತ್ಸವ ನಿಷೇಧ

ಬಳ್ಳಾರಿ: ಬಳ್ಳಾರಿ ತಾಲ್ಲೂಕಿನ ಯರಗುಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಣಕಲ್ಲು ಗ್ರಾಮದಲ್ಲಿ ಜೂನ್ 4 ಮತ್ತು 5 ರಂದು ಆಯೋಜಿಸಲಾಗಿದ್ದ ಶ್ರೀ ದುರುಗಮ್ಮ ಮತ್ತು ಮರಿಗಮ್ಮ ದೇವಿಯ ದೇವರ ಜಾತ್ರೆ ಹಾಗೂ ಕುಂಭೋತ್ಸವ ಕಾರ್ಯಕ್ರಮಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ನಾಗೇಂದ್ರ ಪ್ರಸಾದ್ ಕೆ. ಆದೇಶ ಹೊರಡಿಸಿದ್ದಾರೆ.

ಬೆಣಕಲ್ಲು ಗ್ರಾಮದಲ್ಲಿ ಸುಮಾರು 18 ವರ್ಷಗಳ ಹಿಂದೆ (2009ರಲ್ಲಿ) ಸಾಂಪ್ರದಾಯಿಕ ಕುಂಭೋತ್ಸವ ನಡೆದಿತ್ತು. ಆ ಬಳಿಕ ವಿವಿಧ ಕಾರಣಗಳಿಂದಾಗಿ ಕಳೆದ 18 ವರ್ಷಗಳಿಂದ ಈ ಕಾರ್ಯಕ್ರಮ ನಡೆದಿರಲಿಲ್ಲ. ಪ್ರಸಕ್ತ ಸಾಲಿನಲ್ಲಿ ಶ್ರೀ ದುರುಗಮ್ಮ ಮತ್ತು ಮರಿಗಮ್ಮ ದೇವಿಯ ಟ್ರಸ್ಟ್ ಸಮಿತಿಯವರು ಜಾತ್ರೆ ಮತ್ತು ಕುಂಭೋತ್ಸವವನ್ನು ಆಯೋಜಿಸಿದ್ದರು.

ಈ ಕಾರ್ಯಕ್ರಮದ ಕುರಿತು ಗ್ರಾಮದ ಎರಡು ಗುಂಪುಗಳ ನಡುವೆ ತೀವ್ರ ಭಿನ್ನಾಭಿಪ್ರಾಯಗಳು ಮೂಡಿದ್ದವು. ಫೆಬ್ರವರಿ 24ರಂದು ಸಿರುಗುಪ್ಪ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾಗೂ ಮೇ 19ರಂದು ಸಹಾಯಕ ಆಯುಕ್ತರ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲೂ ಗ್ರಾಮಸ್ಥರ ನಡುವೆ ದಿನಾಂಕ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಒಮ್ಮತ ಮೂಡಿರಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ವೇಳೆ ಈ ಪರಿಸ್ಥಿತಿಯಲ್ಲಿ ಜಾತ್ರೆ ಮತ್ತು ಕುಂಭೋತ್ಸವ ಜರುಗಿದಲ್ಲಿ ಗ್ರಾಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರುವ ಸಂಭವ ಇರುವುದರಿಂದ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಸಹಾಯಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.

ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ವರದಿಗಳನ್ನು ಪರಿಗಣಿಸಿ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು, ಗ್ರಾಮದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜೂನ್ 04 ಮತ್ತು 05 ರಂದು ನಡೆಯಬೇಕಿದ್ದ ಎಲ್ಲಾ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular