ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ತಿರುಚಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಜೆಪಿಯ ಸಾಮಾಜಿಕ ಜಾಲತಾಣ ಸಂಚಾಲಕ ಪ್ರಶಾಂತ್ ಮಾಕನೂರು ನೀಡಿದ ದೂರಿನ ಅನ್ವಯ ಡಾ. ಲಕ್ಷ್ಮಿಕಾಂತ ಸಿಂಹ ಎಂಬುವರ ವಿರುದ್ಧ ದೂರು ದಾಖಲಾಗಿದೆ.
ಲಕ್ಷ್ಮಿಕಾಂತ ಸಿಂಹ ಎಂಬ ವ್ಯಕ್ತಿಯು ತನ್ನ ಫೇಸ್ ಬುಕ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಹೆಣ್ಣಿನ ಜೊತೆ ಅಶ್ಲೀಲ ರೀತಿ ಎಡಿಟ್ ಮಾಡಿ ಪ್ರಧಾನಿಗಳ ಘನತೆ ಮತ್ತು ಹುದ್ದೆಗೆ ಧಕ್ಕೆ ತಂದು ಅಪಹಾಸ್ಯ ಮಾಡಿ ಸಮಾಜದಲ್ಲಿ ಶಾಂತಿ ಭಂಗ ಮಾಡುವ ಉದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸಿ ಜನರ ನಡುವೆ ರಾಜಕೀಯ ದ್ವೇಷ ಹುಟ್ಟು ಹಾಕಿದ್ದಾರೆ.
ಅರಾಜಕತೆ ಸೃಷ್ಟಿಸಲು ಸುಳ್ಳು ಸುದ್ದಿ ಪೋಸ್ಟ್ ಮಾಡಿ ದೇಶದ್ರೋಹದ ಕೆಲಸದಲ್ಲಿ ತೊಡಗಿದ್ದಾರೆ. ಈ ಕೃತ್ಯ ಸಮಾಜದಲ್ಲಿ ರಾಜಕೀಯ ಪಕ್ಷಗಳ ಗುಂಪುಗಳ ನಡುವೆ ಘರ್ಷಣೆಗೆ ಪ್ರೇರೇಪಿಸುವುದು ಸ್ಪಷ್ಟವಾಗಿದೆ. ಹೀಗಾಗಿ ಲಕ್ಷ್ಮಿಕಾಂತ ಸಿಂಹ ಎಂಬ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

