HomeSportsನನ್ನ ಕುಟುಂಬ ಮತ್ತು ಡ್ಯಾನ್ಸ್ ಕ್ಲಾಸ್ ಮಕ್ಕಳನ್ನು ಬಿಟ್ಟುಬಿಡಿ: ವಿಡಿಯೋ ವೈರಲ್ ಬೆನ್ನಲ್ಲೇ ಕಣ್ಣೀರಿಟ್ಟ ಶ್ರೇಷ್ಠ...

ನನ್ನ ಕುಟುಂಬ ಮತ್ತು ಡ್ಯಾನ್ಸ್ ಕ್ಲಾಸ್ ಮಕ್ಕಳನ್ನು ಬಿಟ್ಟುಬಿಡಿ: ವಿಡಿಯೋ ವೈರಲ್ ಬೆನ್ನಲ್ಲೇ ಕಣ್ಣೀರಿಟ್ಟ ಶ್ರೇಷ್ಠ ಅಯ್ಯರ್!

ಐಪಿಎಲ್ 2026 ರ ಪ್ಲೇಆಫ್ ರೇಸ್‌ನಿಂದ ಪಂಜಾಬ್ ಕಿಂಗ್ಸ್ ತಂಡ ಹೊರಬಿದ್ದ ಬೆನ್ನಲ್ಲೇ, ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಸಹೋದರಿ ಶ್ರೇಷ್ಠ ಅಯ್ಯರ್ ತೀವ್ರ ಸೋಷಿಯಲ್ ಮೀಡಿಯಾ ಟ್ರೋಲಿಂಗ್ ಹಾಗೂ ಬೆದರಿಕೆಗಳಿಗೆ ಒಳಗಾಗಿದ್ದಾರೆ. ಪಂಜಾಬ್ ತಂಡದ ನಿರ್ಗಮನಕ್ಕೆ ಶ್ರೇಷ್ಠ ಅವರ ವೈರಲ್ ವಿಡಿಯೋ ಒಂದೇ ಕಾರಣ ಎಂದು ಆಕ್ರೋಶಗೊಂಡಿರುವ ಅಭಿಮಾನಿಗಳು, ಈಗ ಅವರ ವೃತ್ತಿಪರ ಕೆಲಸದ ನಂಬರ್‌ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ.

ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಕೇವಲ ಒಂದು ಅಂಕದ ವ್ಯತ್ಯಾಸದಿಂದ ಪ್ಲೇಆಫ್ ತಲುಪುವ ಅವಕಾಶವನ್ನು ಕಳೆದುಕೊಂಡಿತು. ಈ ನಡುವೆ ಶ್ರೇಷ್ಠ ಅಯ್ಯರ್ ಪೋಸ್ಟ್ ಮಾಡಿದ್ದ ವಿಡಿಯೋ ಒಂದರಲ್ಲಿ, ಪಂಜಾಬಿಗಳು ದೊಡ್ಡ ಹೃದಯದವರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಒಂದು ಅಂಕವನ್ನು ದಾನ ನೀಡಿದ್ದಾರೆ ಎಂಬರ್ಥದಲ್ಲಿ ಬಿಂಬಿಸಲಾಗಿತ್ತು. ಈ ವಿಡಿಯೋ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಅವರು ಅದನ್ನು ಡಿಲೀಟ್ ಮಾಡಿದ್ದರೂ, ಅಭಿಮಾನಿಗಳು ಅದರ ಸ್ಕ್ರೀನ್ ರೆಕಾರ್ಡಿಂಗ್‌ಗಳನ್ನು ಹಂಚಿಕೊಂಡು ಶ್ರೇಷ್ಠ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ.

ಅಭಿಮಾನಿಗಳ ವರ್ತನೆಗೆ ಬೇಸತ್ತ ಶ್ರೇಷ್ಠ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಇಡೀ ವಿವಾದದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿರುವ ಶ್ರೇಷ್ಠ ಅಯ್ಯರ್, ಟ್ರೋಲಿಂಗ್ ಮಾಡುವವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ನಿಮಗೆ ಅದು ಟ್ರೋಲಿಂಗ್ ವಿಡಿಯೋ ಎನಿಸಿರಬಹುದು, ಆದರೆ ನನ್ನ ಪ್ರಕಾರ ಅದು ಕೇವಲ ಒಂದು ತಮಾಷೆಯ ವಿಡಿಯೋ ಅಷ್ಟೇ ಆಗಿತ್ತು. ಅದರ ಹಿಂದೆ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ. ನನ್ನ ಸಹೋದರನ ತಂಡವನ್ನು ನಾನು ಬೆಂಬಲಿಸುತ್ತಿದ್ದೆ ಅಷ್ಟೇ. ನನ್ನ ಸಹೋದರ ಕೂಡ ಒಬ್ಬ ಕ್ರಿಕೆಟರ್ ಆಗಿರುವುದರಿಂದ ನನಗೆ ಎಲ್ಲಾ ಆಟಗಾರರ ಮೇಲೆ ಗೌರವವಿದೆ” ಎಂದು ಅವರು ಹೇಳಿದ್ದಾರೆ.

ಕೆಲಸವಿಲ್ಲದ ಕೆಲವು ಕಿಡಿಗೇಡಿಗಳು ನನ್ನ ಪೋಸ್ಟ್‌ಗಳ ಕೆಳಗೆ ಅಶ್ಲೀಲ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ನಾನು ಅದಕ್ಕೆ ಪ್ರತಿಕ್ರಿಯಿಸದಿದ್ದಾಗ, ನನ್ನ ವೃತ್ತಿಪರ ಕೆಲಸಕ್ಕೆ ಸಂಬಂಧಿಸಿದ ಫೋನ್ ನಂಬರ್‌ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕುಟುಂಬ ಮತ್ತು ವಿದ್ಯಾರ್ಥಿಗಳಿಗೆ ಕಾಟ:

“ಅದು ನನ್ನ ಆಫೀಸ್ ನಂಬರ್ ಆಗಿರುವುದರಿಂದ ನನ್ನ ಜೊತೆ ಕೆಲಸ ಮಾಡುವವರು ಕರೆಗಳನ್ನು ಸ್ವೀಕರಿಸುತ್ತಾರೆ. ಹಾಗೆ ಕಾಲ್ ರಿಸೀವ್ ಮಾಡಿದಾಗ ನನ್ನ ಬಗ್ಗೆ, ನನ್ನ ಜೊತೆ ಕೆಲಸ ಮಾಡುವವರ ಬಗ್ಗೆ ಮತ್ತು ನನ್ನ ಇಡೀ ಕುಟುಂಬದ ಬಗ್ಗೆ ಅತ್ಯಂತ ಕೆಟ್ಟದಾಗಿ ಬೈಯಲಾಗುತ್ತಿದೆ. ಮಧ್ಯರಾತ್ರಿಯಲ್ಲೂ ಕರೆ ಮಾಡಿ ಹರಾಸ್ ಮಾಡಲಾಗುತ್ತಿದೆ. ನೀವು ಎಲ್ಲಾ ಗೆರೆಗಳನ್ನು ದಾಟುತ್ತಿದ್ದೀರಿ” ಎಂದು ಶ್ರೇಷ್ಠ ಕಿಡಿಕಾರಿದ್ದಾರೆ.

ತಾವು ಡ್ಯಾನ್ಸ್ ಕ್ಲಾಸ್ ಹೇಳಿಕೊಡುವ ಸಣ್ಣ ಸಣ್ಣ ವಿದ್ಯಾರ್ಥಿಗಳನ್ನು ಕೂಡ ಈ ಟ್ರೋಲರ್‌ಗಳು ಬಿಡುತ್ತಿಲ್ಲ ಎಂದು ಆರೋಪಿಸಿರುವ ಅವರು, ನಿಮಗೆ ಏನಾದರೂ ಕೋಪವಿದ್ದರೆ ಅದನ್ನು ನನ್ನ ಮೇಲಷ್ಟೇ ತೋರಿಸಿ, ನನ್ನ ಸುತ್ತಮುತ್ತಲಿನ ಅಮಾಯಕ ಜನರನ್ನು ಇದರಲ್ಲಿ ಎಳೆದು ತರಬೇಡಿ ಎಂದು ಮನವಿ ಮಾಡಿದ್ದಾರೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿದ್ದರಿಂದ ಪಂಜಾಬ್ ಕಿಂಗ್ಸ್ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿತ್ತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular