ಢಾಕಾ: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಪಲ್ಟಿಯಾದ ಪರಿಣಾಮ 15 ಜನರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದ ತಂಗೈಲ್ ಜಿಲ್ಲೆಯ ಸೊರಾಟೊಯಿಲ್ ಹೆದ್ದಾರಿಯಲ್ಲಿ ನಡೆದಿದೆ.
ಈದ್ ಅಲ್-ಅಧಾ’ ಆಚರಣೆಗಾಗಿ ತಮ್ಮ ಕುಟುಂಬಗಳನ್ನು ಸೇರಲು ತಾಯ್ನಾಡಿಗೆ ಹೊರಟಿದ್ದ ದಿನಗೂಲಿ ಕಾರ್ಮಿಕರಿದ್ದ ಟ್ರಕ್ ಪಲ್ಟಿಯಾಗಿ ಬಿದ್ದಿದೆ. ಬಾಂಗ್ಲಾ ರಾಜಧಾನಿ ಢಾಕಾದಿಂದ ವಾಯುವ್ಯಕ್ಕೆ ಸುಮಾರು 83 ಕಿಲೋಮೀಟರ್ ದೂರದಲ್ಲಿರುವ ತಂಗೈಲ್ ಜಿಲ್ಲೆಯ ಸೊರಾಟೊಯಿಲ್ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಪೊಲೀಸ್ ಅಧಿಕಾರಿ ಫುವಾದ್ ಹೊಸೈನ್ ಅವರು ನೀಡಿರುವ ಮಾಹಿತಿ ಪ್ರಕಾರ, ಕಬ್ಬಿಣದ ಸರಳುಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಒಂದರಲ್ಲಿ ಹಬ್ಬದ ರಜೆಗೆ ಮನೆಗೆ ಮರಳುತ್ತಿದ್ದ ಪ್ರಯಾಣಿಕರು ಲಿಫ್ಟ್ ಪಡೆದು ಪ್ರಯಾಣಿಸುತ್ತಿದ್ದರು. ಈ ಟ್ರಕ್ ಢಾಕಾದಿಂದ ಉತ್ತರ ಪ್ರಾಂತ್ಯಗಳ ಕಡೆಗೆ ಚಲಿಸುತ್ತಿದ್ದಾಗ, ಸೊರಾಟೊಯಿಲ್ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಕಬ್ಬಿಣದ ಸರಳುಗಳ ಭಾರ ಮತ್ತು ಅಪಘಾತದ ಭೀಕರತೆಗೆ 15 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಟ್ರಕ್ ಹಾಗೂ ಕಬ್ಬಿಣದ ಸರಳುಗಳ ನಡುವೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಆದರೆ 15 ಜನರು ಮೃತಪಟ್ಟಿದ್ದರು. ಗಾಯಗೊಂಡಿರುವ 10 ಕ್ಕೂ ಹೆಚ್ಚು ಜನರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಅಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ಗುರುವಾರ ಬಕ್ರೀದ್ ಹಬ್ಬವಿದ್ದ ಹಿನ್ನೆಲೆಯಲ್ಲಿ ಸಂಭ್ರಮದಿಂದ ಕಾರ್ಮಿಕರು ತಮ್ಮ ಊರಿಗೆ ತೆರಳುತ್ತಿದ್ದರು. ಆದರೆ ಅರ್ಧ ದಾರಿಯಲ್ಲಿಯೇ ಅಪಘಾತಕ್ಕೆ ಬಲಿಯಾಗಿದ್ದು, ಕುಟುಖ್ಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

