ಬೆಂಗಳೂರು: ನಕಲಿ ಚಿನ್ನಾಭರಣಗಳನ್ನು ಒತ್ತೆ ಇಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದು ಬ್ಯಾಂಕ್ ಗೆ ವಂಚಿಸಿದ ಆರೋಪದ ಮೇಲೆ ರಾಷ್ಟ್ರೀಕೃತ ಬ್ಯಾಂಕ್ ನ ಚಿನ್ನ ಮೌಲ್ಯಮಾಪಕ ಸೇರಿದಂತೆ ನಾಲ್ವರ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರ್ತೂರಿನ ರಾಷ್ಟ್ರೀಕೃತ ಬ್ಯಾಂಕ್ ವೊಂದರ ಶಾಖೆಯ ವ್ಯವಸ್ಥಾಪಕ ಎಸ್.ಎನ್. ಆದರ್ಶ್ ನೀಡಿದ ದೂರಿನ ಅನ್ವಯ ಬ್ಯಾಂಕ್ ನ ಚಿನ್ನ ಮೌಲ್ಯಮಾಪಕ ರವಿಕುಮಾರ್ ಮತ್ತು ಆತನ ಸಹಚರರಾದ ಮೋಹನರೆಡ್ಡಿ, ಕೇಶವ ಮತ್ತು ಮಹದೇಶ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ಕೈಗೊಳ್ಳಲಾಗಿದೆ.
ಆರೋಪಿಗಳ ಪೈಕಿ ರವಿಕುಮಾರ್ ಬ್ಯಾಂಕಿನ ವರ್ತೂರು ಶಾಖೆಯಲ್ಲಿ ಮೂರು ವರ್ಷಗಳಿಂದ ಚಿನ್ನ ಮೌಲ್ಯಮಾಪಕನಾಗಿ ಕೆಲಸ ಮಾಡುತ್ತಿದ್ದ. ಮೋಹನರೆಡ್ಡಿ, ಕೇಶವ ಮತ್ತು ಮಹದೇಶ ಅವರಿಗೆ ಕಮಿಷನ್ ಆಸೆ ತೋರಿಸಿ ನಕಲಿ ಚಿನ್ನಾಭರಣಗಳನ್ನು ಅವರ ಹೆಸರಿನಲ್ಲಿ ಅಡಮಾನ ಇರಿಸಿ ಲಕ್ಷಾಂತರ ರೂಪಾಯಿ ಸಾಲ ಪಡೆಯುತ್ತಿದ್ದ. ನಂತರ ಅವರಿಗೆ ಕಮಿಷನ್ ಹಣ ನೀಡುತ್ತಿದ್ದ.
ಈ ಮಧ್ಯೆ ಪ್ರತಿ ತ್ರೈಮಾಸಿಕದಲ್ಲಿ ಒಮ್ಮೆ ಬೇರೊಬ್ಬ ಮೌಲ್ಯಮಾಪಕನ ಮೂಲಕ ಚಿನ್ನಾಭರಣ ಪರಿಶೀಲಿಸಿದಾಗ ಮೋಹನರೆಡ್ಡಿ ಹೆಸರಿನಲ್ಲಿರುವ ಚಿನ್ನಾಭರಣಗಳು ನಕಲಿ ಎನ್ನುವುದು ಗೊತ್ತಾಗಿದೆ. ಇದೇ ರೀತಿ ಬ್ಯಾಂಕ್ ನ ಬೇರೆ ಶಾಖೆಗಳಲ್ಲಿ ಪರಿಶೀಲಿಸಿದಾಗ ಮೋಹನರೆಡ್ಡಿ, ಕೇಶವ ಮತ್ತು ಮಹದೇಶ ಅವರ ಹೆಸರಲ್ಲಿ ಒತ್ತೆ ಇಟ್ಟಿರುವ ಚಿನ್ನಾಭರಣಗಳು ಕೂಡ ನಕಲಿ ಎನ್ನುವುದು ಗೊತ್ತಾಗಿದೆ.
ಈ ಮೂವರನ್ನು ಬ್ಯಾಂಕ್ ಗೆ ಕರೆಸಿ ವಿಚಾರಣೆ ನಡೆಸಿದಾಗ ರವಿಕುಮಾರ್ ತನ್ನ ಚಿನ್ನಾಭರಣಗಳನ್ನು ತನ್ನ ಹೆಸರಲ್ಲಿಯೇ ಅಡಮಾನ ಇಡಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಹೆಸರಲ್ಲಿ ಒತ್ತೆ ಇರಿಸಿ ಸಾಲ ಪಡೆದು ಬಳಿಕ ಅದಕ್ಕೆ ಕಮಿಷನ್ ನೀಡುತ್ತೇನೆ ಎಂದು ನಂಬಿಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಬ್ಯಾಂಕಿಗೆ ರೂ.16.53 ಲಕ್ಷ ವಂಚಿಸಿದ ರವಿಕುಮಾರ್ ಮತ್ತು ಆತನ ಮೂವರು ಸಹಚರರ ವಿರುದ್ಧ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

