ಚಿಕ್ಕಮಗಳೂರು: ಕಾಮಗಾರಿ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಎಂಎಲ್ ಸಿ ಸಿ.ಟಿ.ರವಿ ಸಮ್ಮುಖದಲ್ಲಿಯೇ ಎರಡೂ ಪಕ್ಷದ ಕಾರ್ಯಕರ್ತರು ಕೈಕೈ ಮಿಲಾಯಿಸಿಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ರಾಂಪುರದಲ್ಲಿ ಈ ಘಟನೆ ನಡೆದಿದೆ. ಮೆಡಿಕಲ್ ಕಾಲೇಜಿಗೆ ಅನುದಾನ ತಂದಿರುವ ವಿಚಾರವಾಗಿ ಶಾಸಕ ತಮ್ಮಯ್ಯ ಹಾಗೂ ಎಂಎಲ್ ಸಿ ಸಿ.ಟಿ ರವಿ ನಡುವೆ ಜಟಾಪಟಿ ಶುರುವಾಗಿದೆ. ನಾನು ತಂದಿರುವ ಅನುದಾನಕ್ಕೆ ಶಾಸಕ ತಮ್ಮಯ್ಯ ತಾನು ತಂದಿರುವ ಅನುದಾನ ಎಂಬಂತೆ ಪೋಸ್ ಕೊಡುತ್ತಿದ್ದಾರೆ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ರಾಂಪುರದಿಂದ ಶಕ್ತಿನಗರದವರೆಗೂ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿ ಸಿ.ಟಿ.ರವಿ ಹಾಗೂ ಬಿಜೆಪಿ ಕಾರ್ಯಕರ್ತರು ವಾಪಾಸ್ ಆಗುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಎದುರಾಗಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಕೈಕೈ ಮಿಲಾಯಿಸಿಕೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಈ ವೇಳೆ ಎಂಎಲ್ ಸಿ ಸಿಟಿ ರವಿ ನಡುರಸ್ತೆಯಲ್ಲಿಯೇ ಕಾರ್ಯಕರ್ತರ ಜೊತೆ ಧರಣಿ ಕುಳಿತಿದ್ದಾರೆ. ಸ್ಥಳದಲ್ಲಿ ಹೈಡ್ರಾಮಾ ನಡೆದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಸ್ಥಳದಲ್ಲಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, 2022ರಲ್ಲಿ ಮಂಜೂರಾದ ಕಾಮಗಾರಿಗೆ ಈಗ ವರ್ಕ್ ಆರ್ಡರ್ ಕೊಟ್ಟಿದ್ದಾರೆ. ಕಾಮಗಾರಿ ವಿಳಂಬವನ್ನು ಪ್ರಶ್ನೆ ಮಾಡಿದ್ದಕ್ಕೆ ಇವರ ಬಳಿ ಉತ್ತರವಿಲ್ಲ. 5,800 ಕೋಟಿ ಅನುದಾನ, ಮೆಡಿಕಲ್ ಕಾಲೇಜು ತಂದಿದ್ದು ನಾನು. ನಾನು ತಂದಿರುವ ಅನುದಾನಕ್ಕೆ ಇವರು ಪೋಸ್ ಕೊಡುತ್ತಿದ್ದಾರೆ ಎಂದು ಶಾಸಕ ತಮ್ಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

