ಬೆಂಗಳೂರು: ಕಾವೇರಿ ನ್ಯಾಯಮಂಡಳಿಯು ಕೈಗಾರಿಕಾ ಉದ್ದೇಶಕ್ಕೆ ಮೀಸಲಿಟ್ಟಿರುವ ನೀರಿನಲ್ಲೇ ಕೆರೆ ಅಭಿವೃದ್ಧಿ ಯೋಜನೆಯನ್ನು ರೂಪಿಸಲಾಗಿದೆಯೇ ಹೊರತು, ಕೃಷಿಗೆ ಬಳಸುವ ಒಂದು ಹನಿ ನೀರನ್ನೂ ನಾವು ಮುಟ್ಟುತ್ತಿಲ್ಲ. ಬೆಂಗಳೂರು ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆಯಿಂದ ಸ್ಥಳೀಯ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ರೈತರಿಗೆ ಕೊಳ್ಳೇಗಾಲದ ಅಗರ–ಮದ್ದೂರು ಕೆರೆ ಅಭಿವೃದ್ಧಿ ಯೋಜನೆ ವರವಾಗಲಿದೆ. ವರ್ಷಕ್ಕೆ 2 ಬೆಳೆ ಗ್ಯಾರಂಟಿ ಎಂದು ತಿಳಿಸಿದ್ದಾರೆ.
ಕೊಳ್ಳೇಗಾಲದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿ ಅಗರ ಮತ್ತು ಮದ್ದೂರು ಕೆರೆಗಳ ಅಭಿವೃದ್ಧಿ ಯೋಜನೆ ಕುರಿತು ಸ್ಥಳೀಯ ರೈತ ಬಾಂಧವರಲ್ಲಿರುವ ಗೊಂದಲಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.
ಕಾವೇರಿ ನ್ಯಾಯಮಂಡಳಿಯು ಕೈಗಾರಿಕಾ ಉದ್ದೇಶಕ್ಕೆ ಮೀಸಲಿಟ್ಟಿರುವ ನೀರಿನಲ್ಲೇ ಈ ಯೋಜನೆಯನ್ನು ರೂಪಿಸಲಾಗಿದೆಯೇ ಹೊರತು, ಕೃಷಿಗೆ ಬಳಸುವ ಒಂದು ಹನಿ ನೀರನ್ನೂ ನಾವು ಮುಟ್ಟುತ್ತಿಲ್ಲ. ಬೆಂಗಳೂರು ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಈ ಯೋಜನೆಯಿಂದ ಸ್ಥಳೀಯ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ, ಬದಲಿಗೆ ವರವಾಗಲಿದೆ ಎಂಬುದನ್ನು ಸಚಿವರು ಮನವರಿಕೆ ಮಾಡಿಕೊಟ್ಟಿದ್ದಾರೆ.
ರೈತರಿಗಾಗುವ ಪ್ರಮುಖ ಅನುಕೂಲಗಳು:
ವರ್ಷಕ್ಕೆ 2 ಬೆಳೆ ಗ್ಯಾರಂಟಿ: ಪ್ರಸ್ತುತ ವರ್ಷಕ್ಕೆ ಕೇವಲ 1 ಬೆಳೆ ಬೆಳೆಯುತ್ತಿರುವ ನಮ್ಮ ಅಚ್ಚುಕಟ್ಟು ಪ್ರದೇಶದ ರೈತರು, ಈ ಯೋಜನೆ ಪೂರ್ಣಗೊಂಡ ನಂತರ ವರ್ಷಕ್ಕೆ 2 ಬೆಳೆಗಳನ್ನು ಸುಲಭವಾಗಿ ಬೆಳೆಯಬಹುದು.
10 ಪಟ್ಟು ಸಾಮರ್ಥ್ಯ ಹೆಚ್ಚಳ: ಅಗರ ಮತ್ತು ಮದ್ದೂರು ಕೆರೆಗಳ ಸಾಮರ್ಥ್ಯವನ್ನು ಕ್ರಮವಾಗಿ 1.156 ಮತ್ತು 1.112 ಟಿಎಂಸಿ ಅಡಿಗೆ (ಹತ್ತು ಪಟ್ಟು) ಹೆಚ್ಚಿಸಲಾಗುವುದು. ಕೆರೆಗಳ ಆಳವನ್ನು ಮಾತ್ರ ಹೆಚ್ಚಿಸಲಾಗುತ್ತದೆಯೇ ಹೊರತು, ರೈತರ ಯಾವುದೇ ಹೊಸ ಜಮೀನಿನ ಸ್ವಾಧೀನ ಇರುವುದಿಲ್ಲ.
ಸುತ್ತಮುತ್ತಲಿನ ಕೆರೆಗಳ ವಿಕಾಸ: ಈ ಕೆರೆಗಳ ಕೆಳಭಾಗದಲ್ಲಿರುವ ಚಿಕ್ಕಹೊಳೆ ಮತ್ತು ಸುವರ್ಣಮುಖಿ ಕೆರೆಗಳನ್ನೂ ಅಭಿವೃದ್ಧಿಪಡಿಸಲಾಗುವುದು. ಇದರಿಂದ ವರ್ಷವಿಡೀ ನೀರು ಲಭ್ಯವಿದ್ದು, ಅಂತರ್ಜಲ ವೃದ್ಧಿ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮಕ್ಕೂ ಒತ್ತು ಸಿಗಲಿದೆ.
ಶಾಸಕ ಎ.ಆರ್. ಕೃಷ್ಣಮೂರ್ತಿ ಅವರೊಂದಿಗೆ ಈ ಎಲ್ಲ ಸಂಗತಿಗಳ ಕುರಿತು ಸುದೀರ್ಘವಾಗಿ ಚರ್ಚಿಸಿ ಎಲ್ಲ ಸಂಶಯಗಳನ್ನು ಬಗೆಹರಿಸಲಾಗಿದೆ.
ಶೀಘ್ರದಲ್ಲೇ ಸ್ಥಳೀಯ ರೈತರೊಂದಿಗೆ ಸಭೆ ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರೈತರು ಯಾವುದೇ ಗಾಳಿಮಾತುಗಳಿಗೆ ಕಿವಿಗೊಡಬಾರದು. ರೈತರ ಹಿತ ಕಾಯುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

