ನಿನ್ನೆ ( ಮೇ 19 ) ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 64ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್ಗಳ ಭರ್ಜರಿ ಗೆಲುವನ್ನು ದಾಖಲಿಸಿ ತನ್ನ ಪ್ಲೇಆಫ್ ಪ್ರವೇಶಿಸಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಮಿಚೆಲ್ ಮಾರ್ಷ್ ಹಾಗೂ ಜೋಶ್ ಇಂಗ್ಲಿಸ್ ಅಬ್ಬರದ ಆಟದ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 220 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 221 ರನ್ಗಳ ಸವಾಲಿನ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್, ಯಶಸ್ವಿ ಜೈಸ್ವಾಲ್ ಹಾಗೂ ಧ್ರುವ್ ಜುರೆಲ್ ಜವಾಬ್ದಾರಿಯುತ ಆಟದ ನೆರವಿನಿಂದ 19.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಬಾರಿಸಿತು.
ಲಕ್ನೋ ಸೂಪರ್ ಜೈಂಟ್ಸ್ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ವೈಭವ್ ಸೂರ್ಯವಂಶಿ ನಿನ್ನೆ ಆರಂಭದಲ್ಲಿ ನಿಧಾನಗತಿಯ ಜವಾಬ್ದಾರಿಯುತ ಆಟವನ್ನಾಡಿ ಬಳಿಕ ಅಬ್ಬರಿಸಿ ಬೊಬ್ಬಿರಿದು ಬೌಂಡರಿಗಳ ಸುರಿಮಳೆಗೈದರು. 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ 93 ರನ್ ಬಾರಿಸಿ ಶತಕ ಮಿಸ್ ಮಾಡಿಕೊಂಡ ವೈಭವ್ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ಕಾರಣ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಈ ಇನ್ನಿಂಗ್ಸ್ನಲ್ಲಿ ಬಾರಿಸಿದ 10 ಸಿಕ್ಸರ್ ಮೂಲಕ ವೈಭವ್ ಸೂರ್ಯವಂಶಿ ಈ ಬಾರಿಯ ಸೀಸನ್ನಲ್ಲಿ 50 ಸಿಕ್ಸರ್ಗಳನ್ನು ಪೂರೈಸಿದ್ದು, ಸೀಸನ್ವೊಂದರಲ್ಲಿ 50 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ.
ಸದ್ಯ ವೈಭವ್ ಸೂರ್ಯವಂಶಿ 53 ಸಿಕ್ಸರ್ಗಳನ್ನು ಬಾರಿಸಿದ್ದು, ಐಪಿಎಲ್ ಆವೃತ್ತಿಯೊಂದರಲ್ಲಿ 50 ಸಿಕ್ಸರ್ ಗಡಿ ದಾಟಿದ ಮೊದಲ ಭಾರತೀಯ ಎಂದ ದಾಖಲೆ ಬರೆದಿದ್ದಾರೆ. ಹಾಗೂ ಒಟ್ಟಾರೆ ಎಲ್ಲ ಆಟಗಾರರನ್ನು ಗಣನೆಗೆ ತೆಗೆದುಕೊಂಡಾಗ ಕ್ರಿಸ್ ಗೇಲ್ ಬಳಿಕ ಸೀಸನ್ವೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.
ಆವೃತ್ತಿಯೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿ ಮುಂದಿದೆ.
1. ಕ್ರಿಸ್ ಗೇಲ್ – 59 ಸಿಕ್ಸರ್ಗಳು ( 2012 )
2. ವೈಭವ್ ಸೂರ್ಯವಂಶಿ – 53 ಸಿಕ್ಸರ್ಗಳು ( 2026 )
3. ಆಂಡ್ರೆ ರಸೆಲ್ – 52 ಸಿಕ್ಸರ್ಗಳು ( 2019 )
4. ಕ್ರಿಸ್ ಗೇಲ್ – 51 ಸಿಕ್ಸರ್ಗಳು ( 2013 )
5. ಜೋಶ್ ಬಟ್ಲರ್ – 45 ಸಿಕ್ಸರ್ಗಳು ( 2022 )
6. ಕ್ರಿಸ್ ಗೇಲ್ – 44 ಸಿಕ್ಸರ್ಗಳು ( 2011 )
7. ಅಭಿಷೇಕ್ ಶರ್ಮಾ – 42 ಸಿಕ್ಸರ್ಗಳು ( 2024 )
8. ನಿಕೋಲಸ್ ಪೂರನ್ – 40 ಸಿಕ್ಸರ್ಗಳು ( 2025 )
9. ಶ್ರೇಯಸ್ ಐಯ್ಯರ್ – 39 ಸಿಕ್ಸರ್ಗಳು ( 2025 )
10. ಕ್ರಿಸ್ ಗೇಲ್ – 35 ಸಿಕ್ಸರ್ಗಳು ( 2015 )

