ನಿನ್ನೆ ( ಮೇ 18 ) ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 63ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 5 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿತು. ಜತೆಗೆ ಗುಜರಾತ್ ಟೈಟನ್ಸ್ ಸಹ ಪ್ಲೇಆಫ್ ಸುತ್ತಿಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಕಾರ್ತಿಕ್ ಶರ್ಮಾ ಹಾಗೂ ಡಿವಾಲ್ಡ್ ಬ್ರೆವಿಸ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 181 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಚೇಸಿಂಗ್ ಕಠಿಣವಾದ ಚೆಪಾಕ್ ಪಿಚ್‌ನಲ್ಲಿ ಚೆನ್ನೈ ನೀಡಿದ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸೆನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಬಾರಿಸಿತು.
ಚೆಪಾಕ್ ಬೌಲಿಂಗ್ ಸ್ನೇಹಿ ಪಿಚ್ ಆದ ಕಾರಣ ಮೊದಲು ಬ್ಯಾಟಿಂಗ್ ಮಾಡಿ ಒಂದೊಳ್ಳೆ ಮೊತ್ತ ಕಲೆಹಾಕಿದರೆ ಎದುರಾಳಿಗಳನ್ನು ಕಟ್ಟಿಹಾಕಿ ಗೆಲುವು ಸಾಧಿಸಬಹುದು ಎಂಬ ಕಾರಣದಿಂದ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ಪರ ಆರಂಭಿಕರು ಹೆಚ್ಚು ಹೊತ್ತು ಆಡಲಿಲ್ಲ. ಆರಂಭಿಕ ಆಘಾತ ಅನುಭವಿಸಿದ ತಂಡಕ್ಕೆ ಮೂರನೇ ವಿಕೆಟ್‌ಗೆ ಒಂದಾದ ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸೆನ್ ಜೋಡಿ 41 ಎಸೆತಗಳಲ್ಲಿ 75 ರನ್‌ಗಳ ಜತೆಯಾಟವನ್ನಾಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ತಂಡ 56 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದಾಗ ಕಣಕ್ಕಿಳಿದ ಹೆನ್ರಿಕ್ ಕ್ಲಾಸೆನ್ 26 ಎಸೆತಗಳಲ್ಲಿ 47 ರನ್ ಚಚ್ಚಿದರು. 180.77 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸುತ್ತಿದ್ದ ಕ್ಲಾಸೆನ್ ನೂರ್ ಅಹ್ಮದ್ ಎಸೆದ 15ನೇ ಎಸೆತದ ಮೂರನೇ ಎಸೆತದಲ್ಲಿ ಸ್ಟಂಪ್ ಔಟ್ ಆದರು. ಕ್ಲಾಸೆನ್ ಬ್ಯಾಟ್ ತಪ್ಪಿಸಿ ತಮ್ಮ ಕೈ ಸೇರಿದ ಚೆಂಡನ್ನು ಸ್ಯಾಮ್ಸನ್ ವಿಕೆಟ್‌ಗೆ ಬಡಿದದ್ದು ಥೇಟ್ ಎಂಎಸ್ ಧೋನಿ ಮಿಂಚಿನ ಸ್ಟಂಪಿಂಗ್ ನೆನಪಿಸಿತು.
ಸ್ಯಾಮ್ಸನ್ ಕಿರುಚುತ್ತಾ ಅತಿ ವಿಶ್ವಾಸದಿಂದ ಅಪೀಲ್ ಮಾಡಿದರು. ಥರ್ಡ್ ಅಂಪೈರ್ ಪರಿಶೀಲನೆ ನಡೆಸಿ ಔಟ್ ಎಂದು ತೀರ್ಪು ನೀಡಿದರು. ಹೀಗೆ ಔಟ್ ಎಂದು ತೀರ್ಪು ಹೊರಬೀಳುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಕ್ಲಾಸೆನ್ ಏಕಾಏಕಿ ಸಂಜು ಸ್ಯಾಮ್ಸನ್‌ರತ್ತ ತೆರಳಿ ನಿಂದಿಸಲಾರಂಭಿಸಿದರು. ಅಲ್ಲಿಯವರೆಗೂ ಸಂಜು ಸ್ಯಾಮ್ಸನ್ ಅತಿರೇಕದ ವರ್ತನೆ ಮಾಡುವುದಾಗಲಿ ಅಥವಾ ತೀರ್ಪು ಹೊರಬಿದ್ದ ಬಳಿಕ ಹೆಚ್ಚಾಗಿ ಕಿರುಚಿ ಸಂಭ್ರಮಿಸುವುದನ್ನು ಮಾಡಲಿಲ್ಲ. ಹೀಗಿದ್ದರೂ ಸಹ ಕ್ಲಾಸೆನ್ ಸಂಜ ಬಳಿ ತೆರಳಿ ಬೈದರು. ಈ ವೇಳೆ ಶಿವಮ್ ದುಬೆ ಮಧ್ಯ ಪ್ರವೇಶಿಸಿ ಕ್ಲಾಸೆನ್‌ರನ್ನು ಸಮಾಧಾನಪಡಿಸಿ ಕಳುಹಿಸಿದರು. ಈ ಹೊತ್ತು ಅಂಪೈರ್ ಸಹ ಮಧ್ಯ ಪ್ರವೇಶಿಸಿ ಸಂಜು ಸ್ಯಾಮ್ಸನ್ ಬಳಿ ನಡೆದದ್ದೇನು ಎಂದು ಕಾರಣ ಕೇಳಿದರು. ಸಂಜು ತಾನೇನೂ ಮಾಡಿಲ್ಲ ಎಂದು ತಿಳಿಸಿದರು. ಒಟ್ಟಿನಲ್ಲಿ ಸಂಜು ಮಿಂಚಿನ ಸ್ಟಂಪಿಂಗ್ ತನ್ನ ವೇಗದ ಆಟಕ್ಕೆ ಬ್ರೇಕ್ ಹಾಕಿದ ಹೊಟ್ಟೆಕಿಚ್ಚು ಕ್ಲಾಸೆನ್ ಈ ನಡೆಗೆ ಕಾರಣವಾಗಿರಬಹುದು.

