ಬೆಂಗಳೂರು: ಹಿಂದೂ ಪಂಚಾಂಗದ ಪ್ರಕಾರ ಅಧಿಕ ಮಾಸಕ್ಕೆ ಅತ್ಯಂತ ವಿಶೇಷ ಹಾಗೂ ದೈವಿಕ ಸ್ಥಾನವಿದೆ. ಈ ಮಾಸವನ್ನು ಪುರುಷೋತ್ತಮ ಮಾಸ ಅಥವಾ ಮಲ ಮಾಸ ಎಂದು ಕೂಡ ಕರೆಯಲಾಗುತ್ತದೆ. ಸೌರಮಾನ ಮತ್ತು ಚಾಂದ್ರಮಾನ ಕ್ಯಾಲೆಂಡರ್‌ಗಳ ನಡುವಿನ ದಿನಗಳ ಅಂತರವನ್ನು ಸರಿದೂಗಿಸಲು ಪ್ರತಿ ಮೂರು ವರ್ಷಗಳಿಗೊಮ್ಮೆ ಈ ಹೆಚ್ಚುವರಿ ತಿಂಗಳು ಉದ್ಭವಿಸುತ್ತದೆ. ಸೌರಮಾನ ವರ್ಷದಲ್ಲಿ 365 ದಿನಗಳಿದ್ದರೆ, ಚಾಂದ್ರಮಾನ ವರ್ಷದಲ್ಲಿ 354 ದಿನಗಳಿರುತ್ತವೆ. ಈ 11 ದಿನಗಳ ವ್ಯತ್ಯಾಸವನ್ನು ಸರಿದೂಗಿಸಲು ಬರುವ ಈ ಪವಿತ್ರ ತಿಂಗಳು, ಲೌಕಿಕ ಶುಭ ಕಾರ್ಯಗಳಿಗಿಂತ ಆಧ್ಯಾತ್ಮಿಕ ಸಾಧನೆ ಹಾಗೂ ಜಪ-ತಪಗಳಿಗೆ ಅತ್ಯಂತ ಪ್ರಶಸ್ತವಾಗಿದೆ.
ಅಧಿಕ ಮಾಸದ ರೋಚಕ ಪೌರಾಣಿಕ ಹಿನ್ನೆಲೆ
ಬ್ರಹ್ಮದೇವನು ಸೃಷ್ಟಿಯನ್ನು ಪ್ರಾರಂಭಿಸಿದಾಗ, ಸೂರ್ಯ ಮತ್ತು ಚಂದ್ರರ ಗತಿಯನ್ನು ಆಧರಿಸಿ ವರ್ಷದ 12 ತಿಂಗಳುಗಳನ್ನು ರಚಿಸಿ, ಪ್ರತಿ ತಿಂಗಳಿಗೂ ಒಬ್ಬೊಬ್ಬ ದೇವತೆಯನ್ನು ಅಧಿಪತಿಯನ್ನಾಗಿ ನೇಮಿಸಿದನು. ಆದರೆ ಪ್ರತಿ 3 ವರ್ಷಕ್ಕೊಮ್ಮೆ ಬರುವ ಈ ಹೆಚ್ಚುವರಿ ತಿಂಗಳಿಗೆ (ಅಧಿಕ ಮಾಸ) ಯಾವುದೇ ಅಧಿಪತಿ ದೇವತೆ ಇರಲಿಲ್ಲ. ಯಾವ ದೇವತೆಯೂ ಇದನ್ನು ಅಂಗೀಕರಿಸದ ಕಾರಣ, ಇದನ್ನು ಮಲಮಾಸ (ತ್ಯಾಜ್ಯ ತಿಂಗಳು) ಎಂದು ಕರೆಯಲಾಯಿತು. ಇಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯದ ಕಾರಣ, ಅಪಮಾನದಿಂದ ಕೊರಗಿದ ಅಧಿಕ ಮಾಸವು ಸ್ತ್ರೀರೂಪ ಧರಿಸಿ ವೈಕುಂಠಕ್ಕೆ ಧಾವಿಸಿ ಶ್ರೀಮನ್ನಾರಾಯಣನ ಪಾದಕ್ಕೆ ಬಿದ್ದು ಕಣ್ಣೀರಿಟ್ಟಿತು.
ಅನಾಥರ ರಕ್ಷಕನಾದ ಮಹಾವಿಷ್ಣುವು ಕರುಣೆಯಿಂದ ಅಧಿಕ ಮಾಸವನ್ನು ಕೈಹಿಡಿದೆಬ್ಬಿಸಿ, “ಇಂದಿನಿಂದ ನೀನು ಅನಾಥಳಲ್ಲ, ನಾನೇ ಖುದ್ದಾಗಿ ನಿನಗೆ ಅಧಿಪತಿಯಾಗುತ್ತೇನೆ. ಇಂದಿನಿಂದ ನಿನಗೆ ನನ್ನ ಅತ್ಯುನ್ನತ ನಾಮವಾದ ‘ಪುರುಷೋತ್ತಮ ಮಾಸ’ ಎಂಬ ಹೆಸರನ್ನು ನೀಡುತ್ತೇನೆ” ಎಂದು ವರಗಳನ್ನು ಅನುಗ್ರಹಿಸಿದನು.
ಯಾವ ಚಾಂದ್ರಮಾನ ತಿಂಗಳಲ್ಲಿ ಸೂರ್ಯನ ಸಂಕ್ರಮಣ (ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ) ಇರುವುದಿಲ್ಲವೋ ಆ ತಿಂಗಳನ್ನು ಪಂಚಾಂಗದಲ್ಲಿ ‘ಅಧಿಕ ಮಾಸ’ ಎನ್ನಲಾಗುತ್ತದೆ. ಈ ವರ್ಷ ಮೇ 17ರಿಂದ ಅಧಿಕ ಮಾಸ ಆರಂಭವಾಗಿದ್ದು, ಜೂನ್ 15ರವರೆಗೆ ಇರಲಿದೆ.
ಭಗವಂತನ ಅನುಗ್ರಹ ತರುವ ವಿಶೇಷ ವರಗಳು ಹಾಗೂ ದಾನಗಳು:
ಅನಂತ ಫಲ: ಉಳಿದ ತಿಂಗಳುಗಳಿಗಿಂತ ಈ ಮಾಸದಲ್ಲಿ ಮಾಡುವ ಜಪ, ತಪ, ದಾನಗಳಿಗೆ ಸಾವಿರ ಪಟ್ಟು ಹೆಚ್ಚು ಪುಣ್ಯ ಲಭಿಸುತ್ತದೆ.
ದೀಪದಾನ: ಭಗವಂತನ ಮುಂದೆ ಅಖಂಡ ದೀಪವನ್ನು ಹಚ್ಚುವವರ ಜೀವನದ ಅಜ್ಞಾನದ ಕತ್ತಲೆ ದೂರವಾಗುತ್ತದೆ. ಪ್ರತಿದಿನ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ತುಳಸಿ ಗಿಡಕ್ಕೆ ನೀರು ಮತ್ತು ಹಸುವಿನ ತುಪ್ಪದ ದೀಪವನ್ನು ಅರ್ಪಿಸುವುದರಿಂದ ಲಕ್ಷ್ಮಿ ದೇವಿಯ ಕೃಪೆ ಸದಾ ಇರುತ್ತದೆ.
ಮಾಂಗಲ್ಯ ಬಲ: ಮುತ್ತೈದೆಯರು ತಾಮ್ರದ ಪಾತ್ರೆಯಲ್ಲಿ ತಂಬಿಟ್ಟು ಮತ್ತು ಹಣ್ಣುಗಳನ್ನಿಟ್ಟು ‘ಬಾಗಿನ’ ದಾನ ನೀಡುವುದರಿಂದ ಸೌಭಾಗ್ಯ ವೃದ್ಧಿ ಮತ್ತು ಸತ್ಸಂತಾನ ಪ್ರಾಪ್ತಿಯಾಗುತ್ತದೆ.
ಮಾಲ್ಪುಡ (ಅನರಸ) ದಾನ: ಬ್ರಾಹ್ಮಣರು ಹಾಗೂ ದೀನದಲಿತರಿಗೆ 33 ಅನರಸ ಭಕ್ಷ್ಯಗಳ ದಾನ ಮಾಡುವುದರಿಂದ ಪಿತೃದೋಷ ನಿವಾರಣೆಯಾಗಿ ಸುಖಸಮೃದ್ಧಿ ಲಭಿಸುತ್ತದೆ.
ಪೂಜಾ ಕ್ರಮ: ಈ ತಿಂಗಳಲ್ಲಿ ಪ್ರತಿದಿನ ಮುಂಜಾನೆ ವಿಷ್ಣು ಸಹಸ್ರನಾಮ, ನಾರಾಯಣ ಕವಚ ಅಥವಾ ಭಗವದ್ಗೀತೆಯ 15ನೇ ಅಧ್ಯಾಯ (ಪುರುಷೋತ್ತಮ ಯೋಗ) ಪಠಿಸುವುದು ಶ್ರೇಷ್ಠ. ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡುವುದರಿಂದ ದಾರಿದ್ರ್ಯ ದೂರವಾಗುತ್ತದೆ.
ಯಾವ ಕೆಲಸಗಳನ್ನು ಮಾಡಬಾರದು?
ಅಧಿಕ ಮಾಸವನ್ನು ಕೇವಲ ದೇವರ ಧ್ಯಾನಕ್ಕೆ ಮೀಸಲಿಡಲಾಗಿರುವುದರಿಂದ, ಈ ಅವಧಿಯಲ್ಲಿ ಕೆಲವು ಕಾರ್ಯಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ:
ಶುಭ ಕಾರ್ಯಗಳು ಬಂದ್: ಮದುವೆ, ನಿಶ್ಚಿತಾರ್ಥ, ಗೃಹ ಪ್ರವೇಶ, ಮುಂಜಿ (ಉಪನಯನ), ಮತ್ತು ನಾಮಕರಣದಂತಹ ಪ್ರಮುಖ ಶುಭ ಸಮಾರಂಭಗಳನ್ನು ಈ ಮಾಸದಲ್ಲಿ ಮಾಡಬಾರದು.
ಖರೀದಿಗೆ ಬ್ರೇಕ್: ಹೊಸ ವಾಹನ, ಭೂಮಿ, ಸೈಟ್ ಅಥವಾ ಚಿನ್ನಾಭರಣಗಳನ್ನು ಖರೀದಿಸುವುದು ಹಾಗೂ ಹೊಸ ವ್ಯಾಪಾರ-ವ್ಯವಹಾರವನ್ನು ಆರಂಭಿಸುವುದನ್ನು ಆದಷ್ಟು ತಡೆಯಬೇಕು.
ಆಹಾರ ನಿಯಮ: ಮಾಂಸಾಹಾರ, ಮದ್ಯಪಾನ, ಹಾಗೂ ತಾಮಸಿಕ ಆಹಾರಗಳಾದ ಬೆಳ್ಳುಳ್ಳಿ, ಈರುಳ್ಳಿ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಕೇವಲ ಸಾತ್ವಿಕ ಆಹಾರವನ್ನು ಸೇವಿಸುವುದು ಆರೋಗ್ಯ ಹಾಗೂ ಮನಸ್ಸಿಗೆ ಉತ್ತಮ.

