ಬೆಂಗಳೂರು: ಬೆಂಗಳೂರು- ಮುಂಬೈ ನಡುವೆ ನೂತನ ವಂದೇ ಭಾರತ್ ಸ್ಲೀಪರ್ ರಾತ್ರಿ ರೈಲು ಮತ್ತು ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ರೈಲು ಸಂಚಾರ ಶೀಘ್ರ ಆರಂಭಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಎಸ್ಎಂವಿಟಿ ಬೆಂಗಳೂರು-ಮುಂಬೈ ಎಕ್ಸ್ ಪ್ರೆಸ್ ರೈಲಿಗೆ ವರ್ಚುಯಲ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿ, ಜುಲೈ ಅಥವಾ ಆಗಸ್ಟ್ ನಲ್ಲಿ ಬೆಂಗಳೂರು -ಮುಂಬೈ ನಡುವಿನ ನೂತನ ವಂದೇ ಭಾರತ್ ಸ್ಲೀಪರ್ ರಾತ್ರಿ ರೈಲು ಸಂಚಾರ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ದಕ್ಷಿಣ ಮತ್ತು ಉತ್ತರ ಕರ್ನಾಟಕ ಭಾಗದ ಜನರ ದೀರ್ಘಕಾಲದ ಬೇಡಿಕೆ ಇದಾಗಿದ್ದು, ಜನರ ಅಪೇಕ್ಷೆಗೆ ತಕ್ಕಂತೆ ಬೆಂಗಳೂರಿನಿಂದ ಮುಂಬೈಗೆ ಶೀಘ್ರವೇ ವಂದೇ ಭಾರತ್ ರೈಲನ್ನು ಒದಗಿಸಲಾಗುವುದು. ಬೆಂಗಳೂರು ಕರಾವಳಿ ಕರ್ನಾಟಕ ಮೂಲಕ ಮಡಗಾಂವ್ ಗೆ ಸಂಪರ್ಕಿಸುವ ವಂದೇ ಭಾರತ್ ರೈಲು ಸಂಚಾರ ಶೀಘ್ರ ಆರಂಭವಾಗಲಿದೆ. ಈ ಮಾರ್ಗ ಪ್ರಸ್ತುತ ಪರೀಕ್ಷಾ ಹಂತದಲ್ಲಿದ್ದು, ಘಟ್ಟ ಪ್ರದೇಶದಲ್ಲಿ ವಿಶೇಷ ಬ್ರೇಕಿಂಗ್ ಸಿಸ್ಟಮ್ ಅಳವಡಿಸುವ ಕೆಲಸ ನಡೆಯುತ್ತಿದೆ. ಕರ್ನಾಟಕದಲ್ಲಿ 14 ಜಿಲ್ಲೆಗಳನ್ನು ಸಂಪರ್ಕಿಸುವ 12 ಒಂದೇ ಭಾರತ್ ರೈಲುಗಳು ಸಂಚರಿಸುತ್ತೇವೆ ಎಂದು ಹೇಳಿದ್ದಾರೆ.
ಮುಂದಿನ ದೀರ್ಘಕಾಲಿನ ಯೋಜನೆಯ ಭಾಗವಾಗಿ ಮುಂಬೈ -ಬೆಂಗಳೂರು ಇತರೆ ಪ್ರಮುಖ ನಗರಗಳನ್ನು ಸಂಪರ್ಕಿಸುವ 7,000 ಕಿಲೋಮೀಟರ್ ಉದ್ದದ ಬುಲೆಟ್ ರೈಲು ಜಾಲವನ್ನು ನಿರ್ಮಿಸುವ ಉದ್ದೇಶವಿದೆ. ಬೆಂಗಳೂರು –ಹೈದರಾಬಾದ್, ಬೆಂಗಳೂರು –ಚೆನ್ನೈ ಬುಲೆಟ್ ರೈಲು ಕಾರಿಡಾರ್ ಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

