ವಾಷಿಂಗ್ಟನ್: ಅಮೆರಿಕದ ಐಡಾಹೊದಲ್ಲಿರುವ ಮೌಂಟೇನ್ ಹೋಮ್ ಏರ್ ಫೋರ್ಸ್ ಬೇಸ್ನಲ್ಲಿ ಆಯೋಜಿಸಲಾಗಿದ್ದ ಪ್ರಸಿದ್ಧ ಗನ್‌ಫೈಟರ್ ಸ್ಕೈಸ್ ಏರ್ ಶೋ (Gunfighter Skies Air Show) ಪ್ರದರ್ಶನದ ವೇಳೆ ಅತ್ಯಂತ ಭೀಕರ ಹಾಗೂ ನೆನಪಿಸಿದರೆ ಮೈಮನ ಜುಂ ಎನ್ನುವಂತಹ ವಿಮಾನ ಅಪಘಾತವೊಂದು ಸಂಭವಿಸಿದೆ. ಆಕಾಶದಲ್ಲಿ ಸಾಹಸ ಪ್ರದರ್ಶನ ನೀಡುತ್ತಿದ್ದ ಅಮೆರಿಕ ನೌಕಾಪಡೆಯ (US Navy) ಎರಡು ಅತ್ಯಾಧುನಿಕ ಯುದ್ಧ ವಿಮಾನಗಳು ನಿಯಂತ್ರಣ ತಪ್ಪಿ ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದಿವೆ ಎಂದು ಸಿಬಿಎಸ್ (CBS) ವಾಹಿನಿ ವರದಿ ಮಾಡಿದೆ.
ಅಪಘಾತದ ಭೀಕರತೆಗೆ ಎರಡೂ ವಿಮಾನಗಳು ಕ್ಷಣಾರ್ಧದಲ್ಲಿ ಆಕಾಶದಲ್ಲೇ ಧಗಧಗನೆ ಹೊತ್ತಿ ಉರಿದು, ಸುಟ್ಟು ಕರಕಲಾಗಿ ನೆಲಕ್ಕಪ್ಪಳಿಸಿವೆ. ಈ ಭಯಾನಕ ದೃಶ್ಯದ ವಿಡಿಯೋ ಈಗ ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಲಾಕ್‌ಡೌನ್ ಆದ ಮಿಲಿಟರಿ ಬೇಸ್: ಉನ್ನತ ಮಟ್ಟದ ತನಿಖೆ ಆರಂಭ
ದುರಂತ ಸಂಭವಿಸುತ್ತಿದ್ದಂತೆ ಇಡೀ ಏರ್ ಶೋನಲ್ಲಿದ್ದ ಸಾವಿರಾರು ಪ್ರೇಕ್ಷಕರು ಒಂದು ಕ್ಷಣ ದಿಗ್ಭ್ರಾಂತರಾಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಮೌಂಟೇನ್ ಹೋಮ್ ಏರ್ ಫೋರ್ಸ್ ಬೇಸ್ ಅನ್ನು ತಕ್ಷಣವೇ ಲಾಕ್‌ಡೌನ್ ಮಾಡಲಾಯಿತು ಮತ್ತು ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಯಿತು. ರಕ್ಷಣಾ ಪಡೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, 366ನೇ ಫೈಟರ್ ವಿಂಗ್ ಸಾರ್ವಜನಿಕ ಸಂಪರ್ಕ ಕಚೇರಿ ನೇತೃತ್ವದಲ್ಲಿ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ಆರಂಭಿಸಲಾಗಿದೆ.
ಬರೋಬ್ಬರಿ 570 ಕೋಟಿ ರೂಪಾಯಿಯ EA-18G ಗ್ರೋಲರ್ಸ್ ವಿಮಾನಗಳು ನುಚ್ಚುನೂರು
ಯುಎಸ್ ಪೆಸಿಫಿಕ್ ಫ್ಲೀಟ್‌ನ ನೌಕಾ ವಾಯುಪಡೆಯ ವಕ್ತಾರೆ ಕಮಾಂಡರ್ ಅಮೆಲಿಯಾ ಉಮಾಯಮ್ (Cmdr. Amelia Umayam) ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ:
ಅಪಘಾತಕ್ಕೀಡಾದ ವಿಮಾನಗಳು ವಾಷಿಂಗ್ಟನ್‌ನ ವ್ಹಿಡ್ಬೆ ದ್ವೀಪದ ಎಲೆಕ್ಟ್ರಾನಿಕ್ ಅಟ್ಯಾಕ್ ಸ್ಕ್ವಾಡ್ರನ್ 129 ಗೆ ಸೇರಿದ EA-18G ಗ್ರೋಲರ್ (EA-18G Growler) ಯುದ್ಧ ವಿಮಾನಗಳಾಗಿವೆ.
ಅಮೆರಿಕ ನೌಕಾಪಡೆಯ ಪ್ರಕಾರ, ಈ ಮಾದರಿಯ ಕೇವಲ ಒಂದು ಯುದ್ಧ ವಿಮಾನದ ವೆಚ್ಚವೇ ಸುಮಾರು 67 ಮಿಲಿಯನ್ ಡಾಲರ್ (ಅಂದರೆ ಅಂದಾಜು 570 ಕೋಟಿ ರೂಪಾಯಿ). ಆಕಾಶದಲ್ಲೇ ಎರಡೂ ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಭಸ್ಮಗೊಂಡಿದ್ದರಿಂದ ಒಟ್ಟು ಸಾವಿರ ಕೋಟಿಗೂ ಅಧಿಕ ಮೌಲ್ಯದ ಮಿಲಿಟರಿ ಆಸ್ತಿ ನಾಶವಾಗಿದೆ.
ನಾಲ್ಕೂ ಪೈಲಟ್‌ಗಳು ಪವಾಡ ಸದೃಶವಾಗಿ ಸೇಫ್
ಆನ್‌ಲೈನ್‌ನಲ್ಲಿ ಲಭ್ಯವಿರುವ ವಿಡಿಯೋಗಳಲ್ಲಿ ಎರಡೂ ಯುದ್ಧ ವಿಮಾನಗಳು ಆಕಾಶದಲ್ಲೇ ಒಂದಕ್ಕೊಂದು ಸಿಕ್ಕಿಹಾಕಿಕೊಂಡು ನಿಯಂತ್ರಣ ಕಳೆದುಕೊಂಡು ಕೆಳಗೆ ಬೀಳುವ ಭೀಕರ ದೃಶ್ಯಗಳಿವೆ. ಆದರೆ, ಈ ಭೀಕರ ದುರಂತದ ನಡುವೆಯೂ ವಿಮಾನದಲ್ಲಿದ್ದ ನಾಲ್ಕು ಮಂದಿ ಏರ್ ಕ್ರೂ ಸಿಬ್ಬಂದಿ (ಪೈಲಟ್‌ಗಳು) ಅತ್ಯಂತ ಅದ್ಭುತ ಸಮಯಪ್ರಜ್ಞೆ ಮೆರೆದಿದ್ದಾರೆ.
ವಿಮಾನಗಳು ಸಂಪೂರ್ಣವಾಗಿ ಜಖಂಗೊಂಡು ಕೆಳಗೆ ಬೀಳುವ ಮುನ್ನವೇ ಪೈಲಟ್‌ಗಳು ತಮ್ಮ ಸೀಟಿನ ‘ಎಜೆಕ್ಟ್’ (Eject) ಬಟನ್ ಒತ್ತುವ ಮೂಲಕ ಪ್ಯಾರಾಚೂಟ್ ಸಹಾಯದಿಂದ ಹೊರ ಜಿಗಿದಿದ್ದಾರೆ. ಆಕಾಶದಲ್ಲಿ ನಾಲ್ಕು ಪ್ಯಾರಾಚೂಟ್‌ಗಳು ತೆರೆದುಕೊಂಡು ಸಿಬ್ಬಂದಿ ಸುರಕ್ಷಿತವಾಗಿ ಇಳಿಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪೈಲಟ್‌ಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕಮಾಂಡರ್ ಅಮೆಲಿಯಾ ಉಮಾಯಮ್ ಸ್ಪಷ್ಟಪಡಿಸಿದ್ದಾರೆ.
ಪ್ರಸಿದ್ಧ ಏರ್ ಶೋ ರದ್ದು:
ರಕ್ಷಣಾ ಇತಿಹಾಸ ಮತ್ತು ಆಧುನಿಕ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸುವ ಈ ಪ್ರಸಿದ್ಧ ಏರ್ ಶೋನಲ್ಲಿ ಯುಎಸ್ ಏರ್ ಫೋರ್ಸ್‌ನ ಹೆಮ್ಮೆಯ ಥಂಡರ್‌ಬರ್ಡ್ಸ್ ತಂಡದ ಪ್ರದರ್ಶನವೂ ನಿಗದಿಯಾಗಿತ್ತು. ಆದರೆ ಈ ಭೀಕರ ದುರಂತದ ಹಿನ್ನೆಲೆಯಲ್ಲಿ ಭಾನುವಾರದ ಉಳಿದೆಲ್ಲಾ ಪ್ರದರ್ಶನಗಳನ್ನು ಆಡಳಿತ ಮಂಡಳಿ ತಕ್ಷಣವೇ ರದ್ದುಗೊಳಿಸಿದೆ ಮತ್ತು ಕ್ರಾಶ್ ಆದ ಇಡೀ ಏರಿಯಾವನ್ನು ಮಿಲಿಟರಿ ತನ್ನ ವಶಕ್ಕೆ ಪಡೆದಿದೆ.

