ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇಂಧನ ಉಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ಮನವಿ ಮಾಡಿದ ಮರುದಿನವೇ, ದೇಶದಲ್ಲಿ ಯಾವುದೇ ರೀತಿಯ ಇಂಧನ ಕೊರತೆಯಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ದೇಶದಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಮತ್ತು ಕಚ್ಚಾ ತೈಲದ ಸಾಕಷ್ಟು ಸಂಗ್ರಹವಿದೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.ಭಾರತವು ತನ್ನ ಇಂಧನ ಆಮದಿಗಾಗಿ ಹಲವಾರು ದೇಶಗಳನ್ನು ಅವಲಂಬಿಸಿದೆ. ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮವನ್ನು ಕಡಿಮೆ ಮಾಡಲು ಈಗಾಗಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಅನಗತ್ಯ ಪ್ರಯಾಣ ತಪ್ಪಿಸಿ ಮತ್ತು ಇಂಧನ ಉಳಿಸಿ ಎಂಬ ಪ್ರಧಾನಿಯವರ ಕರೆ ಕೇವಲ ಶಕ್ತಿ ಸಂರಕ್ಷಣೆಗಾಗಿ ಮಾತ್ರವೇ ಹೊರತು ಇಂಧನದ ಕೊರತೆಯಿಂದಾಗಿ ಅಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.ಪಶ್ಚಿಮ ಏಷ್ಯಾದ ಸಮುದ್ರ ಮಾರ್ಗದಲ್ಲಿರುವ ಭಾರತೀಯ ಹಡಗುಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ 10 ಹಡಗುಗಳು ಸುರಕ್ಷಿತವಾಗಿ ಹೊರಬಂದಿವೆ.
ಸೋಮವಾರ ನಡೆದ ಅಂತರ್-ಸಚಿವಾಲಯ ಸಭೆಯ ನಂತರ ಮಾತನಾಡಿದ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿಗಳು, “ದೇಶದಲ್ಲಿ ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ. ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಜನರು ಪ್ಯಾನಿಕ್ ಬೈಯಿಂಗ್ (ಗಾಬರಿಯಿಂದ ಸಂಗ್ರಹಿಸಿಟ್ಟುಕೊಳ್ಳುವುದು) ಮಾಡಬಾರದು,” ಎಂದು ವಿನಂತಿಸಿದ್ದಾರೆ.ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಭಾರತವು ಇಂಧನಕ್ಕಾಗಿ ಹಲವು ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಪೂರೈಕೆ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.

