ಧರ್ಮಸ್ಥಳ: ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಅವರ ನಿಧನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.
ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಅನುಭವ ಹೊಂದಿದ್ದ ಡಿ. ಸುಧಾಕರ್ ಅವರು ಅನೇಕ ಬಾರಿ ಧರ್ಮಸ್ಥಳಕ್ಕೆ ಬಂದು ಹೋಗುತ್ತಿದ್ದರು. ಇತ್ತೀಚೆಗೆ ಆನೆ ಮರಿ ಶಿವಾನಿಯ ಹುಟ್ಟುಹಬ್ಬದ ಆಚರಣೆಯಲ್ಲಿ ಸಚಿವರು ಭಾಗವಹಿಸಿದ್ದರು ಎಂದು ಸ್ಮರಿಸಿದ್ದಾರೆ.
ಸುಧಾಕರ್ ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ಕುಟುಂಬದವರಿಗೆ ಶಕ್ತಿ ತಾಳ್ಮೆ ನೀಡಿ ಮಂಜುನಾಥಸ್ವಾಮಿ ಹರಸಲೆಂದು ಪ್ರಾರ್ಥಿಸುವುದಾಗಿ ಡಾ.ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಇಂದು ಅಂತ್ಯಕ್ರಿಯೆ
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಗಿನ ಜಾವ ಅನಾರೋಗ್ಯದಿಂದ ನಿಧನರಾದ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಂತ್ಯಕ್ರಿಯೆ ಇಂದು ಚಳ್ಳಕೆರೆಯಲ್ಲಿ ನೆರವೇರಲಿದೆ
ಚಳ್ಳಕೆರೆಯ ಅವರ ನಿವಾಸ ‘ಗೊಮ್ಮಟ ನಿಲಯ’ಕ್ಕೆ ಪಾರ್ಥಿವ ಶರೀರ ತರಲಾಗಿದೆ. ಮಧ್ಯಾಹ್ನದವರೆಗೆ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಚಳ್ಳಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಿ. ಸುಧಾಕರ್ ಮೈದಾನಕ್ಕೆ ಮೃತದೇಹ ಕೊಂಡೊಯ್ದು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಚಿತ್ರದುರ್ಗ ರಸ್ತೆಯ ವಿಠ್ಠಲ ನಗರದಲ್ಲಿರುವ ಶಾಂತಕುಮಾರ್ ಮೆಮೋರಿಯಲ್ ಶಟಲ್ ಕೋರ್ಟ್ ಆವರಣಕ್ಕೆ ಮೃತದೇಹ ಕೊಂಡೊಯ್ಯಲ್ಲಿದ್ದು ಸಕಲ ಸರ್ಕಾರಿ ಗೌರವದೊಂದಿಗೆ ಜೈನ ಧರ್ಮದ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಸಚಿವರು, ಶಾಸಕರು, ಹಿರಿಯ ನಾಯಕರು ಭಾಗವಹಿಸಲಿದ್ದಾರೆ.
ಶೋಕಾಚರಣೆ, ರಜೆ ಘೋಷಣೆ
ಬೆಂಗಳೂರು: ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ. ಸುಧಾಕರ್ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶೋಕಾಚರಣೆ ಘೋಷಣೆ ಮಾಡಿದೆ. ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಸೋಮವಾರ ಸರ್ಕಾರಿ ರಜೆ ಘೋಷಿಸಲಾಗಿದೆ. ಜಿಲ್ಲೆಯಾದ್ಯಂತ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.

