ಪಾಟ್ನಾ: ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಬಿಜೆಪಿ-ಎನ್ಡಿಎ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಮಾಜಿ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಅವರಿಗೆ ಮಂತ್ರಿ ಸ್ಥಾನ ಲಭ್ಯವಾಗಿದೆ.
ಮಾಜಿ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಬಿಹಾರ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಜೆಡಿಯು ನಾಯಕ ನಿಶಾಂತ್ ಕುಮಾರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರು ನಿಶಾಂತ್ ಕುಮಾರ್ ಸೇರಿದಂತೆ ಒಟ್ಟು 31 ನಾಯಕರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನಿತೀಶ್ ಕುಮಾರ್ ಸಾಕ್ಷಿಯಾದರು. ಎನ್ಡಿಎ ಮೈತ್ರಿಕೂಟದ ಪ್ರಮುಖ ನಾಯಕರೆಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮುಂಬರುವ ಚುನಾವಣೆಗೆ ಒಗ್ಗಟ್ಟು ಪ್ರದರ್ಶಿಸಿದರು.
ನಿಶಾಂತ್ ಕುಮಾರ್ ಸಂಪುಟ ಸೇರಿರುವುದು ಬಿಹಾರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮಾಜಿ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ, ಅನುಭವಿಗಳಾದ ಶ್ರಾವಣ್ ಕುಮಾರ್ ಮತ್ತು ಅಶೋಕ್ ಚೌಧರಿ ಅವರು ಮತ್ತೆ ಸಂಪುಟ ಸೇರಿದ್ದಾರೆ. ಎನ್ಡಿಎ ಮೈತ್ರಿಕೂಟದ ಐದೂ ಪಕ್ಷಗಳಾದ ಬಿಜೆಪಿ, ಜೆಡಿ(ಯು), ಎಲ್ಜೆಪಿ (ರಾಮ್ ವಿಲಾಸ್), ಹ್ಯಾಮ್ (HAM) ಮತ್ತು ಆರ್ಎಲ್ಎಂ ನಾಯಕರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗಿದೆ.
ಭಗವಾನ್ ಸಿಂಗ್ ಕುಶ್ವಾನ್, ಅರುಣ್ ಶಂಕರ್ ಪ್ರಸಾದ್, ರಮಾ ನಿಶಾದ್, ಮದನ್ ಸಾಅಹ್ನಿ, ಡಾ.ಸಂತೋಷ್ ಕುಮಾರ್ ಸುಮನ್, ರತ್ನೇಷ್ ಸದಾ, ಕುಮಾರ್ ಶೈಲೇಂದ್ರ, ಶೀಲಾ ಕುಮಾರಿ, ಕೇದಾರ್ ಪ್ರಸಾದ್ ಗುಪ್ತಾ ಸೇರಿದಂತೆ 31 ನಾಯಕರು ಸಚಿವ ಸಂಪುಟ ಸೇರಿದ್ದಾರೆ.

