ಬೆಂಗಳೂರು: ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಫಲಿತಾಂಶ ಇಡೀ ದೇಶದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ನಟ ಸಿ. ಜೋಸೆಫ್ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ತನ್ನ ಚೊಚ್ಚಲ ಚುನಾವಣೆಯಲ್ಲೇ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ದಶಕಗಳ ಕಾಲ ತಮಿಳುನಾಡನ್ನು ಆಳಿದ್ದ ಪ್ರಮುಖ ದ್ರಾವಿಡ ಪಕ್ಷಗಳನ್ನು ಹಿಂದಿಕ್ಕಿ ಮುನ್ನಡೆದಿರುವ ವಿಜಯ್ ಅವರ ಈ ಐತಿಹಾಸಿಕ ಸಾಧನೆಗೆ ಚಿತ್ರರಂಗದ ಗಣ್ಯರು ಶ್ಲಾಘಿಸುತ್ತಿದ್ದಾರೆ.
ಸದ್ಯ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ನಿರ್ದೇಶಕ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಭಾರಿ ವೈರಲ್ ಆಗುತ್ತಿದೆ.
ಹೊಸ ಇತಿಹಾಸ ಬರೆದ ವಿಜಯ್ ಅವರಿಗೆ ಹಾರೈಕೆಗಳು
ತಮಿಳುನಾಡು ರಾಜಕೀಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ದಳಪತಿ ವಿಜಯ್ ಅವರಿಗೆ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಅವರು ಮನಸಾರೆ ಅಭಿನಂದನೆ ಸಲ್ಲಿಸಿದ್ದಾರೆ. ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ನಟ ವಿಜಯ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಸಮರ್ಥ ನಾಯಕತ್ವದಲ್ಲಿ ತಮಿಳುನಾಡು ರಾಜ್ಯವು ಮತ್ತಷ್ಟು ಪ್ರಗತಿಯ ಪಥದಲ್ಲಿ ಸಾಗಲಿ ಮತ್ತು ನಿಮ್ಮ ಸಾರ್ವಜನಿಕ ಸೇವೆ ಇನ್ನಷ್ಟು ಬಲಗೊಳ್ಳಲಿ ಎಂದು ಆಶಿಸುತ್ತೇನೆ. ನಿಮ್ಮ ಈ ಅಸಾಧಾರಣ ಸಾಧನೆಯು ಖಂಡಿತವಾಗಿಯೂ ದೇಶದ ಲಕ್ಷಾಂತರ ಯುವ ಜನಾಂಗಕ್ಕೆ ರಾಜಕೀಯಕ್ಕೆ ಬರಲು ಮತ್ತು ಸಾರ್ವಜನಿಕ ಸೇವೆ ಮಾಡಲು ದೊಡ್ಡ ಮಟ್ಟದ ಸ್ಫೂರ್ತಿಯಾಗಲಿದೆ, ಎಂದು ರಿಷಬ್ ಶೆಟ್ಟಿ ಭಾವುಕರಾಗಿ ಬರೆದುಕೊಂಡಿದ್ದಾರೆ.
ಯುವ ಭಾರತಕ್ಕೆ ಹೊಸ ದಿಕ್ಸೂಚಿ
ರಾಜಕೀಯ ವಿಶ್ಲೇಷಕರ ಪ್ರಕಾರ, ಸದಾ ಹಳೇ ರಾಜಕೀಯ ಮುಖಗಳನ್ನು ನೋಡಿ ಬೇಸತ್ತಿದ್ದ ತಮಿಳುನಾಡಿನ ಯುವ ವೋಟರ್ಸ್ಗೆ ವಿಜಯ್ ಅವರ ಕ್ಲೀನ್ ಇಮೇಜ್ ಮತ್ತು ಜನಪರ ಸಿದ್ಧಾಂತ ಹೊಸ ಭರವಸೆ ನೀಡಿದೆ. ಕೇವಲ 2024ರಲ್ಲಿ ಪಕ್ಷ ಸ್ಥಾಪಿಸಿ, ಯಾವುದೇ ಪ್ರಮುಖ ಮೈತ್ರಿ ಇಲ್ಲದೆ ಒಂಟಿಯಾಗಿ ಅಖಾಡಕ್ಕಿಳಿದಿದ್ದ ವಿಜಯ್, ಮೊದಲ ಪ್ರಯತ್ನದಲ್ಲೇ ಸೆಂಚುರಿ (108 ಸ್ಥಾನ) ಬಾರಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ದಕ್ಷಿಣ ಭಾರತದ ಪ್ರಮುಖ ನಟರುಗಳಲ್ಲೊಬ್ಬರಾದ ರಿಷಬ್ ಶೆಟ್ಟಿ ಅವರು ವಿಜಯ್ ಅವರ ಈ ಯಶಸ್ಸನ್ನು ಕೊಂಡಾಡಿರುವುದು ಉಭಯ ಚಿತ್ರರಂಗದ ಅಭಿಮಾನಿಗಳಲ್ಲಿ ಸಂತಸ ತಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ವೀಟ್ ಸಖತ್ ಸೌಂಡ್ ಮಾಡುತ್ತಿದೆ.

