ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಹೊಸ ತಿರುವು ಸಿಕ್ಕಿದೆ. ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡರಿಗಿಂತ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
2023ರ ಮೇ 13 ರಂದು ಸಿಂಧುವಾಗಿದ್ದ ಅಂಚೆ ಮತಗಳ ಪೈಕಿ 255 ಮತಗಳು ತಿರಸ್ಕೃತವಾಗಿದ್ದು, ಕಾಂಗ್ರೆಸ್ ಶಾಸಕ ರಾಜೇಗೌಡರಿಗೆ ಶಾಕ್ ಎದುರಾಗಿದೆ. ಅಂಚೆ ಮತಗಳ ಪತ್ರದಲ್ಲಿ ಡಬ್ಬಲ್ ಟಿಕ್ ಹಿನ್ನೆಲೆಯಲ್ಲಿ ಅವುಗಳನ್ನು ತಿರಸ್ಕರಿಸಲಾಗಿದೆ.
2023ರ ಮೇ 13 ರಂದು ನಡೆದ ಮತ ಎಣಿಕೆಯ ವೇಳೆ 569 ಅಂಚೆ ಮತಗಳನ್ನು ರಾಜೇಗೌಡ ಪಡೆದುಕೊಂಡಿದ್ದರು. 569 ಮತಗಳಲ್ಲಿ 255 ಮತಗಳು ತಿರಸ್ಕೃತವಾಗಿವೆ. ಜೀವರಾಜ್ ಅವರಿಗೆ ಬಂದಿದ್ದ 692 ಮತಗಳಲ್ಲಿ ಎರಡು ಮತಗಳು ತಿರಸ್ಕೃತವಾಗಿದೆ.
ಮರು ಮತ ಎಣಿಕೆ ನಂತರ ಅಭ್ಯರ್ಥಿಗಳ ನಡುವಿನ ಗೆಲುವಿನ ಅಂತರ 201 ಮತಗಳಾಗಿವೆ. ಮರುಮತ ಎಣಿಕೆಯಲ್ಲಿ ಜೀವರಾಜ್ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ಒಟ್ಟು 1822 ಅಂಚೆ ಮತ ಚಲಾವಣೆಯಾಗಿದೆ. ಅಂಚೆ ಮತಗಳಲ್ಲಿ 1540 ಮಾತ್ರ ಸಿಂಧುವಾಗಿದ್ದು 279 ತಿರಸ್ಕೃತ, ಎರಡು ನೋಟಾ ಬಂದಿದೆ. ತನಗೆ ಬಹುಮತ ಬಂದಿದೆ ಎಂದು ಜೀವರಾಜ್ ಹೇಳಿದ್ದಾರೆ.

