ಬಾರ್‌ವೊಂದರಲ್ಲಿ ಪತ್ನಿಯ ಅಸಭ್ಯವಾಗಿ ಸ್ಪರ್ಶಿಸಿದ ವ್ಯಕ್ತಿಗೆ ಪತಿರಾಯ ಕ್ಷಣಾರ್ಧದಲ್ಲಿ ಪಂಚ್ ನೀಡಿ ನೆಲಕ್ಕೆ ಉರುಳಿಸಿದ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಹಿಳೆಯ ಘನತೆಗೆ ಧಕ್ಕೆ ತಂದ ವ್ಯಕ್ತಿಯನ್ನು ಸ್ಥಳದಲ್ಲೇ ಮೌನವಾಗಿಸಿದ ಪತಿಯ ಕ್ರಮವನ್ನು ಕೆಲವರು ಸಮರ್ಥಿಸಿಕೊಂಡಿದ್ದರೆ, ಇನ್ನು ಕೆಲವರು ಇದು ಕಾನೂನುಬಾಹಿರ ಹಲ್ಲೆ ಎಂದು ಕಿಡಿಕಾರುತ್ತಿದ್ದು, ಈ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
ಬಾರ್‌ವೊಂದರಲ್ಲಿ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಪತಿ ಕೆಲವೇ ಸೆಕೆಂಡುಗಳಲ್ಲಿ ಹೊಡೆದು ಕೆಳಕ್ಕೆ ಉರುಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
X (ಹಿಂದಿನ ಟ್ವಿಟರ್) ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ದಂಪತಿಗಳು ಪೂಲ್ ಟೇಬಲ್ ಬಳಿ ನಿಂತಿರುವುದನ್ನು ಕಾಣಬಹುದು. ಈ ವೇಳೆ ಕುಡಿದ ಅಮಲಿನಲ್ಲಿ ಅಲ್ಲಿಗೆ ಬರುವ ವ್ಯಕ್ತಿಯೊಬ್ಬ ಮಹಿಳೆಯನ್ನು ಅಸಭ್ಯವಾಗಿ ಸ್ಪರ್ಶಿಸಲು ಯತ್ನಿಸುತ್ತಾನೆ. ಇದರ ಬೆನ್ನಲ್ಲೇ ಪರಿಸ್ಥಿತಿ ಕ್ಷಣಾರ್ಧದಲ್ಲಿ ಬದಲಾಗುತ್ತದೆ. ಪತ್ನಿಯ ರಕ್ಷಣೆಗೆ ಧಾವಿಸುವ ಪತಿ, ಆ ವ್ಯಕ್ತಿಗೆ ಬಲವಾಗಿ ಪಂಚ್ ನೀಡುತ್ತಾರೆ. ಏಟಿನ ರಭಸಕ್ಕೆ ಆತ ತಕ್ಷಣವೇ ನೆಲಕ್ಕೆ ಬೀಳುತ್ತಾನೆ. ಗಲಾಟೆಯ ನಡುವೆ ಪತ್ನಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಆಕೆಗೆ ಆಕಸ್ಮಿಕವಾಗಿ ಪೂಲ್ ಕ್ಯೂ (ಕೋಲು) ತಗುಲುತ್ತದೆ. ನಂತರ ಬಾರ್ ಸಿಬ್ಬಂದಿ ಪತಿಯನ್ನು ಅಲ್ಲಿಂದ ಹೊರಹೋಗುವಂತೆ ಸೂಚಿಸುವುದು ವಿಡಿಯೋದಲ್ಲಿದೆ.
ಈ ಘಟನೆಯ ಸಂಪೂರ್ಣ ವಿವರಗಳು ಇನ್ನೂ ಲಭ್ಯವಾಗಿಲ್ಲ. ಇದು ಎಲ್ಲಿ ನಡೆದಿದೆ, ವಿಡಿಯೋದಲ್ಲಿದ್ದವರು ಯಾರು ಮತ್ತು ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಮಾಹಿತಿ ತಿಳಿದುಬಂದಿಲ್ಲ.
ಸಾಮಾಜಿಕ ಜಾಲತಾಣಗಳ ಪ್ರತಿಕ್ರಿಯೆ ಈ ವಿಡಿಯೋ ಕುರಿತು ಇಂಟರ್ನೆಟ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಪತಿಯ ನಡೆಯನ್ನು ಸಮರ್ಥಿಸಿಕೊಂಡಿದ್ದು, “ಇದು ಸಾಂಪ್ರದಾಯಿಕ ಶೈಲಿಯ ಪ್ರತಿಕ್ರಿಯೆ. ಇಂತಹ ಪ್ರತಿಕ್ರಿಯೆಗಳು ದೊರೆತರೆ ಅಸಭ್ಯ ವರ್ತನೆಗಳು ಕಡಿಮೆಯಾಗುತ್ತವೆ,” ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಂದೆಡೆ, ಹಿಂಸೆಯನ್ನು ಕೆಲವರು ಖಂಡಿಸಿದ್ದಾರೆ. “ಇದು ಸ್ವಲ್ಪ ಅತಿಯಾಯಿತು, ಇದನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬಹುದಿತ್ತು,” ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು “ಯಾವುದೇ ಪ್ರಾಣಾಪಾಯ ಇಲ್ಲದಿದ್ದಾಗ ಹಿಂಸೆಗೆ ಇಳಿಯುವುದು ಮೂರ್ಖತನ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾನೂನು ಕ್ರಮದ ಬಗ್ಗೆಯೂ ಚರ್ಚೆಗಳು ನಡೆದಿದ್ದು, “ಕುಡಿದು ಗಲಾಟೆ ಮಾಡುವುದು ತಪ್ಪು, ಆತನ ಮೇಲೆ ದೂರು ನೀಡಬಹುದಿತ್ತು. ಆದರೆ ಪತಿ ದೈಹಿಕ ಹಲ್ಲೆ ನಡೆಸಿರುವುದು ಅಪರಾಧ, ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು,” ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಈ ವಿಡಿಯೋ ಈಗಲೂ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

